ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದೆ. ಲಾಕ್‍ಡೌನ್ ಮಾಡಬೇಕೆ, ಬೇಡವೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಇದರ ಮಧ್ಯೆ ಇದೀಗ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಪ್ರವೇಶ ಬಂದ್ ಮಾಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.
ತಕ್ಷಣದಿಂದ ಜಾರಿಯಾಗುವಂತೆ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ಕಾರ್ಯಾಲಯ ಸಂಪರ್ಕಿಸುವ ಕಚೇರಿಯನ್ನು ಸಾರ್ವಜನಿಕ ಪ್ರವೇಶದಿಂದ ಹೊರಗಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ಸಿಬ್ಬಂದಿ ಕೋವಿಡ್-19 ನಿರ್ವಹಣೆಯ ಒಂದಿಲ್ಲೊಂದು ತಂಡಗಳಲ್ಲಿ ನೇರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಅಥವಾ ಇನ್ನಿತರ ರೀತಿಯಲ್ಲಿ ತೊಡಕಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಜನರ ಅನುಕೂಲಕ್ಕಾಗಿ ಕಿಯೋಸ್ಕ್ ಅಳವಡಿಸಲಾಗುತ್ತಿದ್ದು, ಜನ ಅನ್‍ಲೈನ್ ಮೂಲಕ ಯಾವುದೇ ರೀತಿಯ ವರದಿ ಅಥವಾ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಅದೇಶದಲ್ಲಿ ತಿಳಿಸಲಾಗಿದೆ. ಕಿಯೋಸ್ಕ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿ ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸುವಂತೆ ಹಾಗೂ ಕೆಲಸ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.