ಹಾಸನ: ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷವನ್ನ ಮತ್ತಷ್ಟು ಭದ್ರಗೊಳಿಸಲು ದಳಪತಿಗಳು ಸಜ್ಜಾಗಿದ್ದಾರೆ. ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಖುದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದು, ಇಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ (Congress) ಹಿಡಿತ ಸಾಧಿಸುತ್ತಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾದ ನಂತರ ನಡೆದ ಕೆಲವು ಘಟನೆಗಳಿಂದ ಜೆಡಿಎಸ್ ಕೊಂಚ ಸೊರಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಬೃಹತ್ ಸಮಾವೇಶಗಳನ್ನ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಹಲವು ಸಚಿವರು ಭಾಗಿಯಾಗಿ ಜೆಡಿಎಸ್ ವಿರುದ್ಧ ಸಮರ ಸಾರಿದ್ದಾರೆ. ಅದಕ್ಕೆಲ್ಲ ತಿರುಗೇಟು ನೀಡಲು ಜೆಡಿಎಸ್ ಆಣಿಯಾಗಿದೆ. ಜೆಡಿಎಸ್‌ಗೆ 25 ವರ್ಷ ತುಂಬಿದ ಬೆನ್ನಲ್ಲೇ ಪಾರ್ಟಿಗೆ ಹೊಸ ಚೈತನ್ಯ ನೀಡಲು ದಳಪತಿ ಸಜ್ಜಾಗಿದ್ದಾರೆ. ದೊಡ್ಡಗೌಡರ ಸೂಚನೆಯಂತೆ ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದಾರೆ.
ಬೃಹತ್ ಸಮಾವೇಶ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ
ಇಂದಿನ ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು, 1.20 ಲಕ್ಷ ಕುರ್ಚಿಗಳನ್ನ ಹಾಕಲಾಗಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಜಿಲ್ಲೆಯ ವಿವಿಧೆಡೆಗಳಿಂದ ಸಮಾವೇಶಕ್ಕೆ ಜನರನ್ನ ಕರೆತರಲು 2 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಸಮಾವೇಶಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪಕ್ಷದ ಹಾಲಿ ಶಾಸಕರು, ಎಂಎಲ್‌ಸಿಗಳು, ಮಾಜಿ ಶಾಸಕರು ಸೇರಿ ಜೆಡಿಎಸ್ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಇತ್ತ ಬಂದೋಬಸ್ತ್‌ಗಾಗಿ 1,400 ಕ್ಕೂ ಪೊಲೀಸರು ಹಾಗೂ ಹೋಂಗಾರ್ಡ್‌ಗಳನ್ನ ನಿಯೋಜಿಸಲಾಗಿದೆ.
ಜೆಡಿಎಸ್ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು. ಹಾಸನ ಜಿಲ್ಲೆಗೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಹೆಚ್.ಡಿ ದೇವೇಗೌಡರ ಕೊಡುಗೆ ಇದೆ. ರಾಷ್ಟ್ರದಲ್ಲಿ, ರಾಜ್ಯದಲ್ಲಿ ದ್ರೋಹಿಗಳು ಯಾರು, ಹಾಸನದಲ್ಲಿ ಏನೇನು ನಡೆಯುತ್ತಿದೆ. ಹಾಸನ ಮಹಾ ನಗರಪಾಲಿಕೆ, ಲೋಕಸಭಾ ಚುನಾವಣೆ ಹೇಗೆ ನಡೆಯಿತು ಎಂದು ಸಮಾವೇಶದಲ್ಲಿ ಬಿಚ್ಚಿಡಲಾಗುತ್ತೆ. ನಾವು ಹಿಂದಿನಿಂದ ಯಾರಿಗೂ ಚೂರಿ ಹಾಕಿಲ್ಲ. ಚೂರಿ ಹಾಕಿರೋರು ಯಾರು ಅನ್ನೋದನ್ನು ಬಹಿರಂಗಪಡಿಸುತ್ತೇವೆ ಎಂದು ಗುಡುಗಿದರು.
Laxmi News 24×7