Breaking News

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಮುಂದಾದ ಪುನೀತ್​​​ ಕೆರೆಹಳ್ಳಿ ಮತ್ತೆ ಬಂಧನ

Spread the love

ನೆಲಮಂಗಲ: ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾದ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ಆರೋಪದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ತೆರಳಿದ್ದರು. ಹಸನ್ ಎಂಬಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಲ್ಲದೆ, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಠಾಣೆಯಿಂದ ಹೋಗುತ್ತಿದ್ದ ವೇಳೆ, ಬಾಗಲಗುಂಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪುನೀತ್ ಕೆರೆಹಳ್ಳಿಯ ವಿರುದ್ಧ ಈ ಹಿಂದೆ ಅಕ್ರಮ ಗೋ ಸಾಗಾಟ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಹಲವು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿದ್ದಾರೆ.

ಇದಕ್ಕೂ ಮುನ್ನ, ಡಿಸೆಂಬರ್ 18ರಂದು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿಯೂ ಪುನೀತ್ ಕೆರೆಹಳ್ಳಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಾಂಗ್ಲಾದೇಶದ ಅಕ್ರಮ ವಲಸಿಗರೆಂದು ಆರೋಪಿಸಿ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ಅವರ ಮೇಲೆ ದಾಖಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದು ಹೇಳಿ, ಪುನೀತ್ ಕೆರೆಹಳ್ಳಿ ನೇತೃತ್ವದ ತಂಡವು ಕೆಲ ಶೆಡ್‌ಗಳಿಗೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಶೆಡ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸಿ ಗಲಾಟೆ ನಡೆಸಿದ್ದಾರೆ ಎಂದು ಸಿದ್ದೇಶ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಒಟ್ಟಿನಲ್ಲಿ, ಅಕ್ರಮ ವಲಸಿಗರ ವಿಚಾರದಲ್ಲಿ ಸ್ವಯಂ ಪ್ರೇರಿತ ಕಾರ್ಯಾಚರಣೆ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ ಮೇಲೆ ಒಂದರ ಮೇಲೊಂದು ಪ್ರಕರಣಗಳು ದಾಖಲಾಗುತ್ತಿವೆ. ಅವರ ಚಟುವಟಿಕೆಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.


Spread the love

About Laxminews 24x7

Check Also

ಕೆಕೆಆರ್‌ಟಿಸಿ ಬಸ್ ಹರಿದು 4 ವರ್ಷದ ಕಂದಮ್ಮ ಸಾವು

Spread the loveರಾಯಚೂರು: ಕೆಕೆಆರ್‌ಟಿಸಿ ಬಸ್  ಹರಿದು ನಾಲ್ಕು ವರ್ಷದ ಕಂದಮ್ಮ  ಸಾವನ್ನಪ್ಪಿದ ಘಟನೆ ರಾಯಚೂರು  ಜಿಲ್ಲೆಯ ದೇವದುರ್ಗ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ