ಬೆಳಗಾವಿ 20: ವರ್ಧಮಾನ ಮಹಾವೀರರು ಹಾಗೂ ಬಸವಣ್ಣನವರ ಸಂದೇಶಗಳು ಧರ್ಮ ಹಾಗೂ ಸಮಾಜದಲ್ಲಿ ಬೇರುಬಿಟ್ಟಿದ್ದ ಮೌಢ್ಯತೆಯನ್ನು ಹೊಗಲಾಡಿಸಿ ಸಮಾನತೆ, ದಯೆ, ಕರುಣೆಗಳನ್ನು ಮೂಡಿಸಿದವು. ವ್ಯಕ್ತಿಯ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಿದವು. ಹಾಗಾಗೀ ಇರ್ವರು ವಿಶ್ವದ ವಿಭೂತಿಪುರುಷರು, ಲೋಕಮಾನ್ಯರು ಎಂದು ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಹೇಳಿದರು.
ಅವರು ಬೆಳಗಾವಿ ಶಿವಬಸವನಗರದ ಲಿಂಗಾಯತ ಭವನದಲ್ಲಿ ಮಹಾಸಭೆಯು ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಮಹಾವೀರರು ಮತ್ತು ಬಸವಣ್ಣನವರ ತೌಲನಿಕ ವಿವೇಚನೆ’ ವಿಷಯ ಕುರಿತು ಉಪನ್ಯಾಸ ನೀಡಿದರು. ಮಹಾವೀರರು ಬಸವಣ್ಣನವರ ಪೂರ್ವದಲ್ಲಿ ಸಮಾಜದಲ್ಲಿ ಮೌಢ್ಯತೆ ಹಾಗೂ ಹಿಂಸೆಗಳನ್ನು ಪ್ರತಿಬಂಧಿಸಿದರು. ಸಪ್ತಸೂತ್ರಗಳನ್ನು ಹಾಕಿಕೊಟ್ಟರು. ಬಸವಣ್ಣನವರು ಕೂಡ ಸಪ್ತಸೂತ್ರದ ಮೂಲಕ ಮಾನವನ ಬದುಕಿನ ದರ್ಶನ, ಅಂತರAಗ ಹಾಗೂ ಬಹಿರಂಗದ ಶುದ್ಧತೆಯನ್ನು ವ್ಯಾಖ್ಯಾನಿಸಿದರು. ದಯವೇ ಧರ್ಮದ ಮೂಲವೆಂದು ಧರ್ಮದ ತಿರುಳನ್ನು ಮನವರಿಕೆ ಮಾಡಿದರು. ಇರ್ವರು ಮಾನವತೆಯ ಬೀಜವನ್ನು ಬಿತ್ತಿ ಬೆಳೆದರು. ಕಾಲಮಾನದ ವ್ಯತ್ಯಾಸವಷ್ಟೇ ಇದೆ. ತತ್ತ÷್ವ ಸಿದ್ಧಾಂತಗಳು ಬಹುಹತ್ತಿರ ಇದ್ದಂಥಹವು. ಇಬ್ಬರದೂ ಆದರ್ಶಪಥ ವಿಶ್ವಪಥವಾಗಿತ್ತು. ಆದರೆ ನಾವು ಇಂದು ಮಹಾತ್ಮ ಹೆಸರಿನಲ್ಲಿ ಧರ್ಮದ ಧ್ವಜಗಳನ್ನು ಹಾರಿಸಿ ವಿಕೃತಿ ಮೆರೆಯುತ್ತಿರುವುದು. ಬುದ್ಧ, ಮಹಾವೀರ, ಪೈಗಂಬರ, ಕ್ರೆöÊಸ್ತ, ಬಸವ ಎಲ್ಲರೂ ಕೂಡ ಕಾಲಕಾಲಕ್ಕೆ ಸಮಾಜವನ್ನು ತಿದ್ದುವ ತೀಡುವ ಮಹತ್ತರ ಕಾರ್ಯವನ್ನು ಮಾಡಿದವರು. ಅವರ ಸಂದೇಶಗಳನ್ನು ಅರಿತು ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಲೋಕೋದ್ಧಾರಕರಾಗಿದ್ದ ಈ ಎಲ್ಲ ಮಹಾತ್ಮರು ಬದುಕಿನ ಸತ್ಯವನ್ನು ಮನವರಿಕೆ ಮಾಡಿಕೊಟ್ಟವರು. ಆದರೆ ಅವರು ತೋರಿದ ಪಥದಲ್ಲಿ ಮುನ್ನಡೆದವರು ಅಲ್ಪಮಾತ್ರ. ಇಂದು ಧರ್ಮದ ಸಂಘರ್ಷಗಳು ವಿಕಾರರೂಪವನ್ನು ಪಡೆದಿರುವುದು ದುರ್ದೈವದ ಸಂಗತಿ. ಈ ಜಗತ್ತಿನ ಎಲ್ಲ ಧರ್ಮ ಸ್ಥಾಪಕರ ಜೀವನ ದರ್ಶನವನ್ನು ನಾವು ಅರಿತುಕೊಳ್ಳಬೇಕಾಗಿದೆ. ಮಹಾಸಭೆಯು ಇಂಥ ಚಿಂತನಾರ್ಹವಾದ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಧರ್ಮದರ್ಶನವನ್ನು ನೀಡುತ್ತಿದೆ ಎಂದು ಹೇಳಿದರು.
ಸಾನ್ನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು, ಈ ಜಗತ್ತಿನ ಎಲ್ಲ ಧರ್ಮದ ದಾರ್ಶನಿಕರನ್ನು ಅರಿತುಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಮಹಾವೀರರು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ಅಂತೆಯೆ ಬಸವಣ್ಣವರ ದರ್ಶನವೂ ಮೇರುಶಿಖರ. ಆದರೆ ನಾವಾರೂ ಮಹಾತ್ಮರ ದರ್ಶನಸಾರವನ್ನು ಅರಿತುಕೊಳ್ಳುತ್ತಿಲ್ಲ. ಧರ್ಮಗಳ ಧರ್ಮಗಳ ನಡುವೆ ತುಮಲ ಸಂಘರ್ಷಗಳನ್ನು ಹುಟ್ಟುಹಾಕುತ್ತಿರುವುದು ವಿಪರ್ಯಾಸ. ಸಹಬಾಳ್ವೆ, ಆತ್ಮೋನ್ನತಿಯನ್ನು ಹೇಳಿದ ಮಹಾತ್ಮರ ಸಂದೇಶಗಳನ್ನು ಓದಿ ತಿಳಿದುಕೊಳ್ಳಬೇಕೆಂದು ಕರೆನೀಡಿದರು.
ಸುಜಾತಾ ಮಠಪತಿ ವಚನ ಪ್ರಾರ್ಥನೆ ಮಾಡಿದರು. ಶೈಲಾ ಸಂಸುದ್ದಿ ಸ್ವಾಗತಿಸಿದರು. ಸುನಂದಾ ಹಾಲಬಾವಿ ವಚನ ವಿಶ್ಲೇಷಣೆ ಮಾಡಿದರು. ವಿದ್ಯಾ ಸವದಿ ಅತಿಥಿಗಳನ್ನು ಪರಿಚಯಿಸಿದರು. ಗಾಯತ್ರಿ ಕೆಂಪಣ್ಣವರ ನಿರೂಪಿಸಿದರು. ಸರೋಜನಿ ನಿಶಾನದಾರ ವಂದಿಸಿದರು. ಡಾ.ಎಫ್.ವ್ಹಿ.ಮಾನ್ವಿ, ಡಾ.ಎಚ್.ಬಿ.ರಾಜಶೇಖರ, ಆರ್.ಪಿ.ಪಾಟೀಲ, ಜ್ಯೋತಿ ಬದಾಮಿ, ಎಂ.ವಾಯ್.ಮೆಣಸಿನಕಾಯಿ, ಶಂಕರ ಪಟ್ಟೇದ, ಪ್ರಸಾದ ಹಿರೇಮಠ, ವಿ.ಕೆ.ಪಾಟೀಲ, ರಮೇಶ ಕಳಸಣ್ಣವರ, ಪ್ರಕಾಶ ಬಾಳೆಕುಂದ್ರಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.
Laxmi News 24×7