ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ ನಾಯಕರ ಸಿಎಂ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿಗೆ ಎಳ್ಳುನೀರು ಬಿಟ್ಟಂತಾಗಿದೆ. ನಾಳೆ ನಡೆಯುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಕ್ಕೆ ಆಹಾರ ಆಗಬಾರದೆಂದು ಹೈಕಮಾಂಡ್ ಈ ಹೈಡ್ರಾಮಾಗೆ ತಾತ್ಕಾಲಿಕ ಬ್ರೇಕ್ ಹಾಕುವ ಜೊತೆಗೆ ಇಡ್ಲಿ ದೋಸೆ ತಿನ್ನಲು ಸಿಎಂ-ಡಿಸಿಎಂ ಅವರನ್ನು ಒಂದು ಮಾಡಿದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅಪಹಾಸ್ಯ ಮಾಡಿದರು.
ಚಿಕ್ಕೋಡಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಹೈಕಮಾಂಡ್ ಕುರ್ಚಿ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಅಧಿವೇಶನದ ಬಳಿಕ ಕಿತ್ತಾಟ ಎಲ್ಲಿಗೆ ಹೋಗುತ್ತೆ ಕಾದು ನೋಡಬೇಕು. ಈ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಆಗುತ್ತಿಲ್ಲ. ಎಲ್ಲೆಡೆ ಅಭಿವೃದ್ಧಿ ಕುಂಠಿತವಾಗಿದೆ. ಪ್ರತಿ ಕ್ಷೇತ್ರದ ಪರಿಸ್ಥಿತಿಯು ಒಂದೆ ಆಗಿದೆ. ಇನ್ನಾದರೂ ಕ್ಷೇತ್ರದ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ದಲಿತ ಸಿಎಂ ವಿಚಾರ ಕುರಿತು ಮಾತನಾಡಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡಿದ್ರೆ ಸಂತೋಷ. ಸತೀಶ್ ಜಾರಕಿಹೋಳಿ, ಕೆ.ಹೆಚ್. ಮುನಿಯಪ್ಪ, ಪರಮೇಶ್ವರ್ ಹಾಗೂ ಖರ್ಗೆ ಅವರಿದ್ದು, ನಾಲ್ಕರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ. ದೆಹಲಿಯಿಂದ ಮಲ್ಲಿಕಾರ್ಜುನ್ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿದ್ರು ಸಂತಸ ಎಂದು ಶಾಸಕ ಐಹೋಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾ ವಿಭಜನೆ ಮಾಡುವಂತೆ ಚಿಕ್ಕೋಡಿ ಜಿಲ್ಲೆಗೆ ಕೇಳಿಬರುತ್ತಿದ್ದ ಆಗ್ರಹದ ವಿಚಾರ ಮಾತನಾಡಿ, ಚಿಕ್ಕೋಡಿ ಜಿಲ್ಲೆ ರಚನೆಗೆ ನಮ್ಮ ಬೆಂಬಲವಿದೆ. ಅಧಿವೇಶನ ಸಂದರ್ಭದಲ್ಲಿ ಪ್ರಶ್ನೆ ಕೇಳಲು ಈಗಾಗಲೇ ಬರೆದು ಕೊಟ್ಟಿದ್ದೇನೆ. ಅವಕಾಶ ನೀಡಿಲಿಲ್ಲ ಎಂದರೆ ಗಮನ ಸೆಳೆಯುವ ಸಂದರ್ಭದಲ್ಲಿ ಮಾತನಾಡುತ್ತೇನೆ. ಜಿಲ್ಲಾ ಹೋರಾಟಗಾರ ಜೊತೆಗೆ ನಾನು ಪ್ರತಿಭಟನೆ ನಡೆಸುತ್ತೇನೆ ಎಂದು ಹೇಳಿದರು.
Laxmi News 24×7