ಮಂಡ್ಯ: ಮಹಾಮಾರಿ ಕೊರೊನಾದಿಂದ ಜನರು ಈಗಾಗಲೇ ಭಯಭೀತರಾಗಿದ್ದಾರೆ. ಇದೀಗ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ.
ನಾಗರಾಜು (50) ಸಾವನ್ನಪ್ಪಿರುವ ವ್ಯಕ್ತಿ. ನಾಗರಾಜು ಮೂಲತಃ ಟಿ.ನರಸಿಪುರ ತಾಲೂಕಿನ ಮುಸುಕನಕೊಪ್ಪಲು ಗ್ರಾಮದವರು. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಚ್ಚಾಗುತ್ತಿದೆ. ಇದರಿಂದ ಗಾಬರಿಗೊಂಡು ನಾಗರಾಜು ಮಂಗಳವಾರ ಬೆಂಗಳೂರಿನಿಂದ ಹೊರಟ್ಟಿದ್ದಾರೆ. ಆದರೆ ತಮ್ಮ ಗ್ರಾಮಕ್ಕೆ ಹೋಗುವಷ್ಟಲ್ಲಿ ಕತ್ತಲಾಗುತ್ತದೆ ಎಂದು ತಮ್ಮ ಸಂಬಂಧಿಕರ ಮನೆಯಿದ್ದ ಹೊನಗನಹಳ್ಳಿಗೆ ಬಂದಿದ್ದರು.
ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಕೊಳ್ಳೆಗಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಂತರ ಸಂಬಂಧಿಕರು ನಾಗರಾಜು ಶವವನ್ನು ಮುಸುಕನಕೊಪ್ಪಲು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಇವರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಇಲ್ಲವಾದರೆ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊನೆಗೆ ಸಂಬಂಧಿಕರು ಹೊನಗನಹಳ್ಳಿ ಗ್ರಾಮಕ್ಕೆ ಶವ ತೆಗೆದುಕೊಂಡು ಬಂದು ಮನೆಯೊಂದರ ಮುಂಭಾಗದಲ್ಲಿ ಇಟ್ಟಿದ್ದಾರೆ. ಈ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಅಲ್ಲದೇ ಇವರಿಗೆ ಕೊರೊನಾ ಪರೀಕ್ಷೆ ಮಾಡಿಸದೆ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಂತರ ಸಂಬಂಧಿಕರು ವೈದ್ಯರಿಗೆ ಫೋನ್ ಮಾಡಿ ಹೇಳಿದ್ದಾರೆ. ಆದರೆ ವೈದ್ಯರು ತಡವಾಗಿ ಬಂದಿದ್ದಲ್ಲದೇ, ನಾವು ಶವಕ್ಕೆ ಕೋವಿಡ್ ಪರೀಕ್ಷೆ ಮಾಡುವುದಿಲ್ಲ. ಬೇಕಿದ್ದರೆ ಅವರ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿ ಗ್ರಾಮದಿಂದ ಹೋಗಿದ್ದಾರೆ.
ವೈದ್ಯಾಧಿಕಾರಿಗಳು ಎಡವಟ್ಟು:
ಕೊನೆಗೆ ಮುಸುಕನಕೊಪ್ಪಲು ಗ್ರಾಮಸ್ಥರು ಊರಿನ ಹೊರಗಡೆ ಶವ ಸಂಸ್ಕಾರ ಮಾಡಲು ಒಪ್ಪಿಗೆ ನೀಡಿದ್ದಾರೆ. ಜಿಲ್ಲೆಯ ಹೊನಗನಹಳ್ಳಿಯಿಂದ ಮುಸುಕನಕೊಪ್ಪಲಿಗೆ ಶವ ರವಾನೆ ಮಾಡುವಾಗಲೂ ವೈದ್ಯಾಧಿಕಾರಿಗಳ ಮತ್ತೊಂದು ಎಡವಟ್ಟು ಮಾಡಿದ್ದಾರೆ.
ವೈದ್ಯಾಧಿಕಾರಿಗಳು ಶವ ರವಾನೆಗೆ ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಯನ್ನು ಕಳಿಸದೆ ಎಡವಟ್ಟು ಮಾಡಿದ್ದಾರೆ. ಕುಟುಂಬಸ್ಥರಿಗೆ ಎರಡು ಪಿಪಿಇ ಕಿಟ್ ನೀಡಿ ನೀವೇ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಕೊನೆಗೆ ಸಂಬಂಧಿಕರು ಪಿಪಿಇ ಕಿಟ್ ಹಾಕಿಕೊಂಡು ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ಹೋಗಿದ್ದಾರೆ.
https://youtu.be/ZwocKpMtUVY