ಚಿಕ್ಕೋಡಿ: ನಿರಂತರ ಮಳೆಯ ಹಿನ್ನೆಲೆ ಅಗ್ರಾಣಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಸಂಬರಗಿ – ಆಜೂರ ಗ್ರಾಮಗಳ ನಡುವಿನ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಕಳಪೆ ಗುಣಮಟ್ಟದ ಕಾಮಗಾರಿಗೆ ಯಾರು ಹೊಣೆ ಎಂದು ಸ್ಥಳೀಯರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸಮೀಪ ಅಗ್ರಾಣಿ ಹಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬಾಂದಾರ್ (ಬ್ಯಾರೇಜ್) ನಿರ್ಮಿಸಲಾಗಿತ್ತು. ಆದರೆ, ರಭಸದಿಂದ ಅಗ್ರಾಣಿಗೆ ನೀರು ಆಗಮಿಸಿದ ಹಿನ್ನೆಲೆಯಲ್ಲಿ ಬ್ರಿಡ್ಜ್ ಕಂ ಬಾಂದಾರ್ ನೀರಿನಲ್ಲಿ ಕೊಚ್ಚಿಹೋಗಿದೆ. 2022ರಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಂದಾಜು 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಬಾಂದಾರ್ ಅನ್ನು ನಿರ್ಮಿಸಲಾಗಿತ್ತು. ಇದರ ಎರಡು ಬದಿಯಲ್ಲಿ ತಡೆಗೋಡೆಗಳನ್ನಷ್ಟೇ ನಿರ್ಮಿಸಿ ಒಳಗೆ ಸಿಮೆಂಟ್ ಪೈಪ್ ಅಳವಡಿಸಲಾಗಿತ್ತು. ಗುತ್ತಿಗೆದಾರರು ಬಾಂದಾರ್ ಮೇಲ್ಮೈಯನ್ನು ಭದ್ರಗೊಳಿಸದೆ, ಅನುದಾನ ಕೊರತೆಯ ನೆಪವೊಡ್ಡಿ ಗುಣಮಟ್ಟವನ್ನು ಕಾಯ್ದುಕೊಳ್ಳದೆ ಇಡೀ ಕಾಮಗಾರಿಯು ಕಳಪೆ ಮಟ್ಟದ್ದಾಗಿದೆ ಎಂಬುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸದ್ಯ ಅಗ್ರಾಣಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅದರ ಆರ್ಭಟಕ್ಕೆ ಸಂಪೂರ್ಣ ಬಾಂದಾರ್ ಕೊಚ್ಚಿಹೋಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ರೈತರೂ ಸಹ ತಮ್ಮ ಹೊಲಗಳಿಗೆ ಹೋಗಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.