ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಹಿನ್ನೆಲೆಯಲ್ಲಿ ನೇರ ರೈಲು ಯೋಜನೆ ವಿಳಂಬ ಆಗುತ್ತಿದೆ. ಬೆಳಗಾವಿಯಲ್ಲಿ ಈಗಾಗಲೇ ನೂರಕ್ಕೆ ನೂರರಷ್ಟು ಭೂಸ್ವಾಧೀನ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು. ಈಗಾಗಲೇ ಎರಡ್ಮೂರು ಬಾರಿ ನಾನು ಮಾತಾಡಿದ್ದೇನೆ. ನಾನು ಎಷ್ಟು ಸಲ ಸಂಪರ್ಕ ಮಾಡಿದರೂ ಸಚಿವ ಸಂತೋಷ ಲಾಡ್ ಸ್ಪಂದಿಸುತ್ತಿಲ್ಲ. ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅವರು ಕೂಡ ಮಾತಾಡಿದ್ದಾರೆ. ಇನ್ನೊಂದು ಬಾರಿ ನಾನೇ ಲಾಡ್ ಜೊತೆಗೆ ಮಾತನಾಡುತ್ತೇನೆ. ಅವರು ಯಾಕೆ ಹಾಗೇ ಮಾಡುತ್ತಿದ್ದಾರೋ ಗೊತ್ತಿಲ್ಲ. ಸ್ಪಂದನೆ ಮಾಡದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಬೆಳಗಾವಿ-ಧಾರವಾಡ ನೇರ ರೈಲು ಯೋಜನೆಗೆ ಈಗಾಗಲೇ 937 ಕೋಟಿ ಹಣ ಮೀಸಲಿಡಲಾಗಿದೆ. ಸಂತೋಷ್ ಲಾಡ್ ಇನ್ನೂ ಬೆಳೆಯುತ್ತಿರುವವರು. ಯಾಕೆ ಹಾಗೇ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನೇ ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ಸಿಎಂ ಸಿದ್ದರಾಮಯ್ಯ ಜೊತೆಗೂ ಮಾತಾಡಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗೆ ಹತ್ತಾರು ಬಾರಿ ಮಾತಾಡಿದ್ದೇನೆ. ಧಾರವಾಡ ಡಿಸಿ ಸಿಕ್ಕಾಗ ನನ್ನದೇ ಭಾಷೆಯಲ್ಲಿ ಮಾತಾಡಿದ್ದೇನೆ. ಯಾಕೆ ಹೀಗೆ ಮಾಡುತ್ತಿದ್ದಿರಿ ಅಂತಾ ರಾಜ್ಯ ಸರ್ಕಾರ ತಿಳಿಸಬೇಕು ಎಂದು ವಿ ಸೋಮಣ್ಣ ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸಲ್ಲ. ಬೇರೆ ರಾಜ್ಯದಲ್ಲಿ ಎಷ್ಟು ಸಹಕಾರ ಕೊಡುತ್ತಿದ್ದಾರೆ ನೋಡಿ ಅಂತಾ ಹೇಳಿರುವೆ. ಆದರೆ, ಇವರು ಅಭಿವೃದ್ಧಿ ಕೆಲಸದ ಕಡೆ ನೋಡುತ್ತಿಲ್ಲ, ಬೇರೆ ಕೆಲಸದಲ್ಲಿ ತಲ್ಲೀನರಾಗಿದ್ದಾರೆ ಎಂದು ಸೋಮಣ್ಣ ಕಿಡಿಕಾರಿದರು.