ಕೆಲವು ಸಿನಿಮಾ ಪ್ರೇಮಿಗಳು ಸಿನಿಮಾಗಳನ್ನು ಮಾತ್ರವಲ್ಲದೆ ವೈಯಕ್ತಿಕವಾಗಿ ಸಿನಿಮಾ ನಟ-ನಟಿಯರನ್ನೂ ಬಹಳ ಇಷ್ಟಪಡುತ್ತಾರೆ. ತಮ್ಮ ನೆಚ್ಚಿನ ಕಲಾವಿದರ ಮನೆಯಲ್ಲಿ ನಡೆಯುವ ಸಮಾರಂಭಗಳನ್ನು ಅವರವರ ಅಭಿಮಾನಿಗಳೂ ಸಂಭ್ರಮಿಸುತ್ತಾರೆ.
ಕಲಾವಿದರ ಜನ್ಮ ದಿನಾಚರಣೆಯನ್ನು ತಾವೂ ಆಚರಿಸುತ್ತಾರೆ. ದೂರದೂರುಗಳಿಂದ ತಮ್ಮ ಅಚ್ಚುಮೆಚ್ಚಿನ ಕಲಾವಿದರ ಮನೆಗೆ ಬಂದು ಶುಭ ಹಾರೈಸುವವರೂ ಇದ್ದಾರೆ. ಚಂದನವನದ ಹಲವು ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಜುಲೈನಲ್ಲಿ ಜನ್ಮದಿನದ ಸಡಗರ. ಗೋಲ್ಡನ್ ಸ್ಟಾರ್ ಬಿರುದಾಂಕಿತರಾದ ಗಣೇಶ್ ಜನಿಸಿದ್ದು 1976ರ ಜುಲೈ 2ರಂದು
ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಈ ಸಲದ ಜನ್ಮ ದಿನವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಗಾಳಿಪಟ-2, ಸಖತ್, ತ್ರಿಬಲ್ ರೈಡಿಂಗ್ ಎಂಬ ಫಿಲಂಗಳಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ ಜುಲೈ 12ರಂದು ಜನ್ಮದಿನ. 1962ರಲ್ಲಿ ಜನಿಸಿದ ಇವರು ನಾಯಕ ನಟರಾಗಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಶಿವಣ್ಣನವರ ಜನ್ಮದಿನದಂದು ಪ್ರತಿವರ್ಷ ಕೆಲ ಜನೋಪಯೋಗಿ ಕೆಲಸಗಳು ನಡೆಯುತ್ತವೆ. ಆದರೆ, ಈ ವರ್ಷ ಅವರು ಜನರ ನಡುವೆ ಸೇರುವ ಸಾಧ್ಯತೆ ಕಡಿಮೆ. ಜನ್ಮದಿನದಂದು ಅವರ ಅಭಿನಯದ ಭಜರಂಗಿ-2 ಎಂಬ ಚಿತ್ರದ ಪೆÇೀಸ್ಟರ್ ಬಿಡುಗಡೆಯಾಗುತ್ತದೆ.
ನಟ-ನಿರ್ದೇಶಕ ರಿಷಭ್ ಶೆಟ್ಟಿ 1983ರ ಜುಲೈ 7ರಂದು ಜನಿಸಿದವರು. ತಮ್ಮ ಕ್ರಿಯಾಶೀಲತೆಯಿಂದ ಗಮನ ಸೆಳೆದಿರುವ ಅವರು ಈಗ ಗಿರಿಕಥೆ ಎಂಬ ಚಿತ್ರದ ಪೂರ್ವಭಾವಿ ಕೆಲಸದಲ್ಲಿ ತೊಡಗಿದ್ದಾರೆ. ಲೂಸ್‍ಮಾದ ಎಂದೇ ಖ್ಯಾತರಾಗಿರುವ ಯೋಗೀಶ್ ಅವರು ಜನಿಸಿದ್ದು ಕೂಡ ಜುಲೈನಲ್ಲೇ. ಇದೇ 6ರಂದು ಅವರ 31ನೆ ಜನ್ಮದಿನ. ಅವರ ಅಭಿನಯದ 9ನೆ ದಿಕ್ಕು ಎಂಬ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ.
1973ರ ಜುಲೈ 4ರಂದು ಜನಿಸಿದ ಕೋಮಲ್‍ಕುಮಾರ್ ಅವರು ಹಾಸ್ಯನಟ ಹಾಗೂ ನಾಯಕ ನಟನಾಗಿ ಹೆಸರು ಮಾಡಿದ್ದಾರೆ. ಚಂದ್ರಚಕೋರಿ ಎಂಬ ಚಿತ್ರದಿಂದ ಪರಿಚಿತರಾಗಿ ಈವರೆಗೆ 40 ಚಿತ್ರಗಳಲ್ಲಿ ನಟಿಸಿರುವ ಶ್ರೀನಗರ ಕಿಟ್ಟಿ ಅವರಿಗೆ ಇದೇ 8ರಂದು 44ನೆ ಜನ್ಮ ದಿನಾಚರಣೆ. ಇವರ ಅಭಿನಯದ ಅವತಾರ್ ಪುರುಷ ಎಂಬ ಚಿತ್ರ ಸಿದ್ಧವಾಗುತ್ತಿದೆ.
ಕಲಾತ್ಮಕ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸಿ ಹೆಸರು ಮಾಡಿರುವ ನಟ ಸಂಚಾರಿ ವಿಜಯ್‍ಗೆ ಇದೇ 7ರಂದು 38 ವರ್ಷ ತುಂಬುತ್ತದೆ. ಮೇಲೊಬ್ಬ ಮಾಯಾವಿ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಇವರ ಚಿತ್ರಗಳ ಕೆಲಸ ಅಂತಿಮ ಹಂತದಲ್ಲಿದೆ.
57 ಸಿನಿಮಾಗಳಲ್ಲಿ ಹಾಗೂ ಹಲವಾರು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಹರೀಶ್ ರಾಜ್‍ಗೆ ಜುಲೈ 26ರಂದು ಜನ್ಮದಿನದ ಸಂಭ್ರಮ. ಸಿಹಿಕಹಿ ಗೀತಾ ಅವರೂ ಜುಲೈನಲ್ಲಿ ಜನಿಸಿದವರು. ಹಿರಿಯ ನಿರ್ದೇಶಕರಾದ ಎಸ್.ಕೆ.ಭಗವಾನ್ ಹಾಗೂ ಸಾಯಿ ಪ್ರಕಾಶ್ ಅವರಿಗೂ ಜನ್ಮದಿನ ಮಾಸವಿದು. ದಿವಂಗತ ಕಲ್ಪನಾ (18.7.1943), ಕಲ್ಯಾಣ್ ಕುಮಾರ್ (28.7.1928), ನರಸಿಂಹರಾಜು (24.7.1923), ಸೌಂದರ್ಯ (18.7.1972) ಮುಂತಾದವರು ಕೂಡ ಜುಲೈನಲ್ಲಿ ಜನಿಸಿದವರು.
ಕೊರೊನಾ ವೈರಸ್ ದಾಳಿಯ ಭೀಕರತೆಯು ತಾರೆಯರ ಜನ್ಮದಿನ ಸಂಭ್ರಮದ ಮೇಲೆ ತಣ್ಣೀರೆರಚಿದೆ. ನೀವು ಎಲ್ಲೆಲ್ಲಿ ಇದ್ದೀರೋ ಅಲ್ಲಿಂದಲೇ ನಮಗೆ ಶುಭ ಹಾರೈಸಿ ಎಂದು ಹಲವು ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟ-ನಟಿಯರು ಜನಿಸಿದ ತಿಂಗಳಿದು. ಇಂದು ನಟ ಗಣೇಶ್ ಅವರ ಜನ್ಮದಿನ. ಅವರೂ ಸೇರಿದಂತೆ ಉಳಿದ ಯಾರಿಗೂ ಅದ್ಧೂರಿಯಿಂದ ಜನ್ಮದಿನವನ್ನು ಸಂಭ್ರಮಿಸುವ ಮನಸ್ಸಿಲ್ಲ. ಈ ದಿನಗಳಲ್ಲಿ ನೀವು ನಿಮ್ಮ ನಿಮ್ಮ ಆರೋಗ್ಯದ ಕಾಳಜಿ ವಹಿಸಿ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನಮಗೆ ಶುಭ ಹಾರೈಸಿ ಎಂದು ಹಲವರು ಮನವಿ ಮಾಡಿದ್ದಾರೆ.