ಚಿಕ್ಕೋಡಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಆವರಣದಲ್ಲಿ ಶುದ್ಧ ನೀರಿನ ಘಟಕ ಹಾಗೂ ಆಟದ ಮೈದಾನ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಗಣೇಶ ಮಂದಿರದ ಸಭಾಭವನದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸುರಕ್ಷಾ ಸಪ್ತಾಹ ಮಕ್ಕಳ ಸುರಕ್ಷಾ ಕ್ರಮಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ನೂತನ ಶಾಲಾ ಕೊಠಡಿಗಳು, ಕುಡಿಯುವ ನೀರು, ಮೈದಾನ ಸೇರಿದಂತೆ ವಿವಿಧ ಬಗೆಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಸರ್ಕಾರ ಎಲ್ಲ ರೀತಿ ಕ್ರಮವನ್ನು ಕೈಗೊಂಡಿದೆ.ಎಲ್ಲ ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಹಾಗೂ ಶಿಕ್ಷಕರು ಹೇಳಿದಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಅದಲ್ಲದೆ ಯಡೂರು ಗ್ರಾಮದ ಅಭಿವೃದ್ಧಿಗಾಗಿ 2 ಕೋಟಿ ಅನುದಾನ ನೀಡಲಾಗುವುದು ಎಂದರು.
ಬಳಿಕ ಡಿ ಡಿ ಪಿ ಐ ಸೀತಾರಾಮ ಅವರು ಮಾತನಾಡಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಲೆಗಳ ಮಕ್ಕಳ ಬಗ್ಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸಹ ಖುದ್ದಾಗಿ ಕಾಳಜಿ ವಹಿಸಿ ಸುರಕ್ಷೆಯಿಂದ ಇರಬೇಕು ಎಂದರು. ಹಾಗೂ ಜಿಲ್ಲೆಯಲ್ಲಿ ಎಲ್ಲೆಲ್ಲಿ ಶಾಲಾ ಕೊಠಡಿಗಳು ಶಿಥಿಲಗೊಂಡ ಬಗ್ಗೆ ಮಾಹಿತಿಯನ್ನು ತೆಗೆದುಕೊಂಡು ಅಲ್ಲಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ, ಮಹೇಶ ಕಾಗವಾಡೆ, ಸುರೇಶ ಕಾಗವಾಡೆ, ಶಿವಾನಂದ ಕರೋಶಿ,ಪಂಚಾಕ್ಷರಿ ದಿವಟೆ,ಪಾಂಡುರಂಗ ಕೋಳಿ,ದಾದು ನರವಾಡೆ,ರವಿ ಜಡೆ,ಪ್ರಮೊದ ಮಠಕರ,ಬಸವರಾಜ ಹಂಜಿ,ಪಿಡಿಓ ಕರಗಾರ,ವಿಜಯ ಜಾಧವ,ಚಿದಾನಂದ ಮಾನೆ ಸೇರಿ ಮುಖ್ಯೋಪಾಧ್ಯಾಯರು,ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.