ರಾಯಚೂರು: ಜಿಲ್ಲೆಯ ವಿವಿಧ ಕಡೆ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಜನರು ಪರದಾಡುವಂತಾಗಿದೆ. ಜಿಲ್ಲೆಯ ಮಾನವಿ ತಾಲೂಕಿನ ಅಡವಿಖಾನಾಪುರ ಗ್ರಾಮದಲ್ಲಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆೆ. ಜನರು ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೇ ತಮ್ಮ ಜೀವ ಕೈಯಲ್ಲಿ ಹಿಡಿದು, ಹಳ್ಳಗಳನ್ನು ದಾಟುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಭಾರಿ ಮಳೆಗೆ ಹಳ್ಳಗಳು ತುಂಬಿ ಹರಿದಿದ್ದು, ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮಳೆಯಿಂದ ಶಾಲಾ ಮಕ್ಕಳು, ಆಟೋ ಹಾಗೂ ವಾಹನ ಸವಾರರ ಪರದಾಡಿದ್ದಾರೆ. ಅಡವಿ ಖಾನಾಪುರದಿಂದ ಹೀರಾಪುರ ಗ್ರಾಮದ ಖಾಸಗಿ ಶಾಲೆಗೆ ಹೋಗಿದ್ದ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಆಟೋ ಹಳ್ಳದಲ್ಲಿ ಹೆಚ್ಚಿನ ನೀರಿನ ಹಿನ್ನೆಲೆಯಲ್ಲಿ ರಸ್ತೆ ದಾಟಲಾಗಲಿಲ್ಲ. ಬಳಿಕ ಪೋಷಕರು ಹಳ್ಳದತ್ತ ಬಂದು, ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಮಕ್ಕಳನ್ನು ದಾಟಿಸಿದ್ದಾರೆ. ಇತ್ತ, ಗ್ರಾಮಸ್ಥರು ತಮ್ಮ ಬೈಕ್ಗಳಿಂದ ಇಳಿದು, ವಾಹನಗಳನ್ನು ತಳ್ಳಿಕೊಂಡೇ ಹಳ್ಳ ದಾಟಿದ್ದಾರೆ.
ರಾಜ್ಯದಲ್ಲಿ ಬಿಡದ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ: ಮಳೆ ಬಿರುಸುಗೊಂಡ ಕಾರಣ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೇ ಜುಲೈ 24ರ ವರೆಗೂ ಭಾರೀ ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಮುನ್ಸೂಚನೆ ನೀಡಿದೆ.
ರಾಜ್ಯದ ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.