ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಶುಕ್ರವಾರ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರ ಪೀಠಕ್ಕೆ ಅರ್ಜಿಯ ತುರ್ತು ವಿಚಾರಣೆಯೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭೀಯೋಜಕ ಬಿ.ಎ. ಬೆಳ್ಳಿಯಪ್ಪ, “ವಿಚಾರಣೆಗೆ ಹಾಜರಾಗುವಂತೆ ಕೋರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ತಕ್ಷಣ ವಿಚಾರಣೆಗೆ ಪರಿಗಣಿಸಬೇಕಾದ ಅಗತ್ಯವಿರುವುದಿಲ್ಲ” ಎಂದು ತಿಳಿಸಿದರು.
ವಾದ ಮುಂದುವರೆಸಿದ ಅರ್ಜಿದಾರರ ಪರ ವಕೀಲರು, “ನಮ್ಮ ಕಕ್ಷಿದಾರರು ಏನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಅಂಶ ತಿಳಿಯುವುದಕ್ಕೂ ಮುನ್ನವೇ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ತುರ್ತು ವಿಚಾರಣೆ ನಡೆಸುವುದಕ್ಕೆ ಸರ್ಕಾರ ಏಕೆ ಆಕ್ಷೇಪಿಸುತ್ತಿದೆ ಎಂಬುದೇ ಗೊತ್ತಿಲ್ಲ. ಅರ್ಜಿದಾರ ಬೈರತಿ ಬಸವರಾಜ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಯಾವುದೇ ಹುರಳಿಲ್ಲ. ದೂರುದಾರರು ಅವರ ಹೆಸರನ್ನೂ ಹೇಳಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿದರು.
ವಾದ ಆಲಿಸಿದ ಪೀಠ, ಮಧ್ಯಾಹ್ನ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.
ಪ್ರಕರಣದ ಹಿನ್ನೆಲೆ: ಕಿತ್ತಕನೂರು ಬಳಿ ಖರೀದಿಸಿದ್ದ ನಿವೇಶನವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಿಕ್ಲು ಶಿವ/ ಶಿವಪ್ರಕಾಶ್ಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ತಡರಾತ್ರಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8-9 ಮಂದಿ ಮನೆಯ ಮುಂದೆ ಕಾರಿನ ಬಳಿ ನಿಂತಿದ್ದ ಶಿವಪ್ರಕಾಶ್ನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದಾರೆ. ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ತನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಶಿವಪ್ರಕಾಶ್ ಹೇಳಿಕೊಂಡಿದ್ದ. ಶಾಸಕ ಬೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದಲೇ ಆರೋಪಿಗಳು ನನ್ನ ಮಗನನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಮೃತ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಭಾರತೀನಗರ ಪೊಲೀಸರು, ಬೈರತಿ ಬಸವರಾಜ್ ಸೇರಿದಂತೆ ಜಗದೀಶ್, ಕಿರಣ್, ವಿಮಲ್, ಅನಿಲ್, ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಇದೀಗ ಬೈರತಿ ಬಸವರಾಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.