ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೋಂಕಿತ ಕಂಡಕ್ಟರ್ ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.
ಇಂದು ಓರ್ವ 36 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದುವರೆಗೂ ಹಾಸನದಲ್ಲಿ 479 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 255 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ಸದ್ಯ ಜಿಲ್ಲೆಯಲ್ಲಿ 217 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.