ಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದ ಭಾಗ-1 ಜುಲೈ 4ರಂದು ನಡೆಯಲಿದೆ. ಈ ವೇಳೆ ವಿಜ್ಞಾನ, ತಾಂತ್ರಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ” ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ತಿಳಿಸಿದರು.
ವಿಟಿಯುದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಘಟಿಕೋತ್ಸವ ನಡೆಯಲಿದೆ. ಈ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ. ನಾರಾಯಣ, ಎಕ್ಸೆಲ್ ಇಂಡಿಯಾ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ, ಬೆಂಗಳೂರಿನ ಏಟ್ರಿಯಾ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್. ಸುಂದರರಾಜು ಅವರಿಗೆ ಈ ಬಾರಿ “ಡಾಕ್ಟರ್ ಆಫ್ ಸೈನ್ಸ್” ಪ್ರದಾನ ಮಾಡಲಾಗುತ್ತದೆ” ಎಂದು ತಿಳಿಸಿದರು.
“ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಹಿಸುವರು. ಗೌರವ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಪದ್ಮಶ್ರೀ ಪುರಸ್ಕೃತ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯಕುಮಾರ ಸೂದ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ” ಎಂದು ಪ್ರೊ.ಎಸ್. ವಿದ್ಯಾಶಂಕರ ಹೇಳಿದರು.
“ಅಟಾನಮಸ್ ಕಾಲೇಜು ಸೇರಿ ಬಿಇ-58,861, ಬಿ.ಟೆಕ್-117, ಬಿ.ಪ್ಲಾನ್-10, ಬಿ.ಆರ್ಚ್-1040, ಬಿಎಸ್ಸಿ(ಹಾನರ್ಸ್)-24 ಹೀಗೆ ಒಟ್ಟು 60,052 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು. ಅದೇ ರೀತಿ ಪಿಹೆಚ್ಡಿ 262 ಸಂಶೋಧಾನಾ ಪದವಿ, ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 2 ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ” ಎಂದರು.