ಬೆಂಗಳೂರು: ಸಿಎಂ ಫಂಡ್‍ಗೆ ಬಂದ 290 ಕೋಟಿಯಲ್ಲಿ ಒಂದು ರೂಪಾಯಿಯನ್ನಾದರೂ ಖರ್ಚು ಮಾಡಿದ್ದೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪನವರಿಗೆ ಪ್ರಶ್ನೆ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‍ಡೌನ್‍ಗಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಕಡಿಮೆ ಸೋಂಕಿತ್ತು. ಕಡಿಮೆ ಸೋಂಕು ಇದ್ದಾಗ ನಮಗೆ ಸಿದ್ಧತೆ ಮಾಡಿಕೊಳ್ಳಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಮಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ತಪ್ಪು ನಿರ್ಧಾರಗಳಿಂದ ಸೋಂಕು ಹೆಚ್ಚಾಗಿದೆ. ಜಗತ್ತಿನಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿ ಇದ್ದೇವೆ ಎಂದು ವಾಗ್ದಾಳಿ ಮಾಡಿದರು.
ಇದೇ ವೇಳೆ ತನ್ನ ಹಳೇ ಶಿಷ್ಯನ ಪರವಾಗಿ ಬ್ಯಾಟಿಂಗ್ ಮಾಡಿದ ಸಿದ್ದು, ರಾಜ್ಯ ಸರ್ಕಾರದಲ್ಲಿ ಸಚಿವರುಗಳ ನಡುವೆಯೇ ಸಮನ್ವಯತೆ ಇಲ್ಲ. ಶ್ರೀರಾಮುಲು ಮತ್ತು ಸುಧಾಕರ್ ಇಬ್ಬರಿಗೂ ಸೋಂಕು ನಿರ್ವಹಹಣೆಯ ಜವಾಬ್ದಾರಿ ಕೊಟ್ಟರು. ಈಗ ಸುಧಾಕರ್ ಬಿಟ್ಟು ಅಶೋಕ್‍ಗೆ ಕೊಟ್ಟಿದ್ದಾರಂತೆ. ಸುಧಾಕರ್ ನಿಂದ ಕಿತ್ತು ಅಶೋಕ್‍ಗೆ ಏಕೆ ಕೊಟ್ಟರು? ಬೆಸಿಕಲ್ ಸುಧಾಕರ್ ಡಾಕ್ಟರ್, ಪ್ರಾಕ್ಟೀಸ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಡಿಕಲ್ ಬೆಸಿಕ್ ಗೊತ್ತಿರುತ್ತೆ ಎಂದು ಸುಧಾಕರ್ ಪರವಾಗಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕನ್ನು ತಡೆಯಲು ಸರಿಯಾದ ರೀತಿ ಸಿದ್ಧತೆ ಮಾಡಿಕೊಂಡಿಲ್ಲ. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಅಂತಾರೆ, ನಮ್ಮ ದೇಶದ ಪ್ರಾಕೃತಿಕ ಗುಣ ಲಕ್ಷಣಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆ ಕಾರಣದಿಂದ ಸಾವಿನ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ಬೇರೆ ದೇಶಗಳಿಂತ ಗರಿಷ್ಠ ಶೇ.3 ಮಾತ್ರ ಸಾವಿನ ಸಂಖ್ಯೆ ಇದೆ. ಕರ್ನಾಟಕದಲ್ಲೂ ಶೇಕಡಾ ಶೇ.2ರಿಂದ ಶೇ.3ರಷ್ಟು ಸಾವಿನ ಸಂಖ್ಯೆ ಇದೆ ಎಂದು ಸಿದ್ದು ಮಾಹಿತಿ ನೀಡಿದರು.
ಶವಸಂಸ್ಕಾರ ಮಾಡಲು ಹೆದರುತ್ತಿದ್ದಾರೆ. ಶವ ಸುಟ್ಟ ಬಳಿಕ ಬೂದಿಯನ್ನ ತೆಗೆದುಕೊಳ್ಳುವುದಕ್ಕೆ ಕುಟುಂಬದವರು ಹೆದರುತ್ತಿದ್ದಾರೆ. ಅಗತ್ಯ ಕ್ರಮ ತೆಗೆದುಕೊಂಡು ಶವ ಮುಟ್ಟಿದರೆ ಏನೂ ಆಗಲ್ಲ. ಆರೋಗ್ಯ ಸಚಿವರ ಜಿಲ್ಲೆ ಬಳ್ಳಾರಿಯಲ್ಲಿ ನಡೆದ ಘಟನೆ ಅಮಾನುಷವಾಗಿದೆ. ಸೋಂಕಿತರ ಮೃತದೇಹವನ್ನು ತಿಪ್ಪೆಗೆ ಎಸೆದಾಗೇ ಎಸೆದಿದ್ದಾರೆ. ಹೀಗೇ ಮಾಡಿದರವನ್ನು ಸಸ್ಪೆಂಡ್ ಮಾಡಿದ್ದೇವೆ ಅನ್ನೋದು ಪರಿಹಾರನಾ? ಇಷ್ಟು ಸಾವಿನ ನಂತರವೂ ಶವ ಸಂಸ್ಕಾರ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಬಾರದ ಎಂದು ಸಿದ್ದು ಪ್ರಶ್ನೆ ಮಾಡಿದರು.
ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಮಂತ್ರಿಗಳಲ್ಲಿ ಸಮನ್ವಯತೆ ಇಲ್ಲ. ಇವತ್ತಿನ ತನಕ ಯಾರೊಬ್ಬರಿಗೂ ಪರಿಹಾರ ತಲುಪಿಲ್ಲ. ಕ್ಷೌರಿಕರು, ಆಟೋ ಡ್ರೈವರ್ ಗಳಿಗೆ ಪರಿಹಾರ ತಲುಪಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಇದರಲ್ಲಿ ಎಷ್ಟು ಬೆಡ್? ವೆಂಟಿಲೇಟರ್ ಎಷ್ಟು? ಎಷ್ಟರ ಮಟ್ಟಿಗೆ ಚಿಕಿತ್ಸೆಯಾಗಿದೆ? ಅಂಬ್ಯುಲೆನ್ಸ್ ಎಷ್ಟಿವೆ? ಎಷ್ಟು ಖರ್ಚು ಮಾಡಿದ್ದೇವೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಿ ಎಂದು ಒತ್ತಾಯ ಮಾಡಿದರು.