ಹಾವೇರಿ : ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನ ಸೃಷ್ಟಿಸಿತ್ತು. ಕೊರೊನಾದಲ್ಲಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಕೋವಿಡ್ನಿಂದ ಹೆಚ್ಚು ಸಾವು ಕಂಡ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯೂ ಸಹ ಒಂದಾಗಿತ್ತು. ನಂತರ ಎರಡನೇ ಅಲೆ, ಮೂರನೇ ಅಲೆ ಕಾಣಿಸಿಕೊಂಡರೂ ಸಹ ಹೇಳಿಕೊಳ್ಳುವಂತಹ ಅನಾಹುತಗಳು ಸಂಭವಿಸಿರಲಿಲ್ಲ. ಮತ್ತೆ ಇದೀಗ ಕೊರೊನಾ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ.
ಈಗಾಗಲೇ ಹಾವೇರಿ ತಾಲೂಕಿನ 73 ವರ್ಷದ ವೃದ್ಧನೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿದ್ದು, ಅವರು ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊರೊನಾ ಪತ್ತೆಯಾಗಿದೆ. ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಅವರ ಜೊತೆಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಇತರರ ತಪಾಸಣೆ ನಡೆಸಿದ್ದು, ಅವರ ವರದಿ ಕೊರೊನಾ ನೆಗೆಟಿವ್ ಬಂದಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಭೀಕರತೆಗೆ ಜಿಲ್ಲೆಯ ಜನ ನಲುಗಿ ಹೋಗಿದ್ದರು. ಮತ್ತೆ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮತ್ತೆ ಭಯಬೀತರಾಗಿದ್ದಾರೆ.