ಚಿಕ್ಕೋಡಿ (ಬೆಳಗಾವಿ): ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ ಇಲಾಖೆಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಅಥಣಿ ಪಟ್ಟಣದ ಹೊರವಲಯದಲ್ಲಿ 2019-20ನೇ ಸಾಲಿನಲ್ಲಿ ಆರಂಭಗೊಂಡ ಶ್ರೀ ಅಣ್ಣಪ್ಪ ತೇರದಾಳ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯವರು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಕಚೇರಿಗೆ ಸಲ್ಲಿಸಿದ ಅಗತ್ಯ ದಾಖಲಾತಿಗಳನ್ನು ನಕಲಿ ಸೃಷ್ಟಿಸಿ, ಇಲಾಖೆಗೆ ವಂಚನೆ ಮಾಡಿದ್ದಲ್ಲದೆ ಶಾಲಾ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆನಂದ ಕಿರಶ್ಯಾಳ ಎಂಬವರು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಉಪನಿರ್ದೇಶಕರು ಮತ್ತು ಅವರ ತಂಡ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಾಗದಪತ್ರಗಳಲ್ಲಿ ಸಹಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 39ರಂತೆ ಕಾಲೇಜು ನಡೆಸಲು ನೀಡಿರುವ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು.
ಆದರೆ ಕಾಲೇಜಿನ ಆಡಳಿತ ಮಂಡಳಿಯವರು ಫೋರ್ಜರಿ ಸಹಿ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿರುವ ಆಪಾದನೆಯನ್ನು ಅಲ್ಲಗಳೆದು ಶಿಕ್ಷಣ ಇಲಾಖೆಗೆ ಸಮಜಾಯಿಸಿ ಉತ್ತರ ನೀಡಿದ್ದರು. ಇದಲ್ಲದೆ ಪ್ರಾಧಿಕಾರದ ಅನುಮತಿ ಇಲ್ಲದೆ ಕಾಲೇಜಿನ ಕಟ್ಟಡವನ್ನು ಸ್ಥಳಾಂತರಿಸಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಗೆ ನೀಡಿದ ಕಾಲೇಜು ಕಟ್ಟಡದ ನೀಲ ನಕ್ಷೆ ಮತ್ತು ಈಗ ನಡೆಸುತ್ತಿರುವ ಕಾಲೇಜಿನ ಕಟ್ಟಡ ಬೇರೆಯಾಗಿರುವುದರಿಂದ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಮೇ.23 ರಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶದಂತೆ 2025- 26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶಗಳನ್ನು ಪಡೆದುಕೊಳ್ಳಬಾರದು, ಈಗಾಗಲೇ ವ್ಯಾಸಂಗ ಮಾಡುತ್ತಿರುವ ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಮತ್ತು ಅವರಿಗೆ ಅನಾನುಕೂಲವಾಗದ ನಿಟ್ಟಿನಲ್ಲಿ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿಗೆ ಕ್ರಮ ಜರುಗಿಸುವಂತೆ ಚಿಕ್ಕೋಡಿ ಡಿಡಿಪಿಐಗೆ ನಿರ್ದೇಶನ ನೀಡಲಾಗಿದೆ.