ಹುಬ್ಬಳ್ಳಿ: ನಗರದ ಕಾಲೇಜೊಂದರಲ್ಲಿ ಡಿಪ್ಲೋಮಾ ಓದುತ್ತಿದ್ದ ವಿದ್ಯಾರ್ಥಿನಿಗೆ ಯುವಕನೊಬ್ಬ ಪ್ರೀತಿಸದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಿನೋದರಾಜ್ ಎಂಬಾತನ ವಿರುದ್ಧ ವಿದ್ಯಾರ್ಥಿನಿಯ ಪಾಲಕರು ದೂರು ನೀಡಿದ್ದಾರೆ. ಮೂರು–ನಾಲ್ಕು ವರ್ಷಗಳಿಂದ ವಿನೋದರಾಜ ಜೊತೆ ವಿದ್ಯಾರ್ಥಿನಿಗೆ ಸ್ನೇಹವಿತ್ತು. ಕೆಲ ತಿಂಗಳಿನಿಂದ ಅವನ ವರ್ತನೆಯಲ್ಲಿ ಬದಲಾವಣೆ ಕಂಡು ಬಂದ ಕಾರಣ, ಅವನ ಮೊಬೈಲ್ ನಂಬರ್ನ್ನು ಬ್ಲಾಕ್ ಮಾಡಿದ್ದಳು.
ಇದರಿಂದ ಕೋಪಗೊಂಡ ವಿನೋದರಾಜ್ “ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ಪ್ರೀತಿಸದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕಿ ವಿರೂಪಗೊಳಿಸುವುದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಕಾಲೇಜು ಎದುರು ಪ್ರೀತಿಸುವಂತೆ ಹೆದರಿಸಿ, ಮನೆಗೂ ಬಂದು ಮಗಳ ಕೈಹಿಡಿದು ಎಳೆದಾಡಿದ್ದಾನೆ. ಬಿಡಸಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದ್ದಾನೆ” ಎಂದು ಯುವತಿ ಪೋಷಕರು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.