ಗದಗ: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ 2025-26ರಲ್ಲಿ 7,600 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಕರ್ನಾಟಕಕ್ಕೆ 7 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಿದ್ದು, ಸದ್ಯ 51 ಸಾವಿರ ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಗುರುವಾರ ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ 23.24 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಕಂಡ ಗದಗ ರೈಲ್ವೆ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿ ವರ್ಷ 7 ಸಾವಿರ ಕೋಟಿ ರೂ. ನೀಡುವ ಮೂಲಕ ಅತ್ಯಂತ ಗರಿಷ್ಠ ಅನುದಾನ ಒದಗಿಸಿ ರಾಜ್ಯದ ರೈಲ್ವೆ ಯೋಜನೆಗೆ ವೇಗ ನೀಡಿದೆ ಎಂದು ಹೇಳಿದರು.
2014ರಲ್ಲಿ ದೇಶದಲ್ಲಿ 21-22 ಸಾವಿರ ಕಿ. ಮೀ. ರೈಲ್ವೆ ಮಾರ್ಗ ವಿದ್ಯುದ್ದೀಕರಣ ಆಗಿತ್ತು. ಸದ್ಯ 69 ಸಾವಿರ ಕಿ. ಮಿ. ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಕೇವಲ ದಶಕದ ಅವಧಿಯಲ್ಲಿ 40 ಸಾವಿರ ಕಿ. ಮೀ. ವಿದ್ಯುದ್ದೀಕರಣ ಮಾಡಿರುವುದು ದಾಖಲೆ ಮಾತ್ರವಲ್ಲದೇ, ಜಗತ್ತಿನಲ್ಲಿಯೇ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಹೊಂದಿದ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದರು.
ರೈಲ್ವೆಗಳ ವಿದ್ಯುದ್ದೀಕರಣದಿಂದ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಡೀಸೆಲ್ ಮೇಲಿನ ಅವಲಂಬನೆ ಹಾಗೂ ವಾಯು ಮಾಲಿನ್ಯ ಕಡಿಮೆಯಾಗಲು ಕಾರಣವಾಗಿದೆ. ಸದ್ಯ ದೇಶದ 99 ಪ್ರತಿಶತ ರೈಲುಗಳು ವಿದ್ಯುತ್‌ನಿಂದ ಓಡುತ್ತಿದ್ದು, ಈ ಪೈಕಿ ಶೇ. 50ರಷ್ಟು ಕಲ್ಲಿದ್ದಲು ಮೂಲಕ ಉತ್ಪತ್ತಿಯಾಗುವ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದರೆ, ಇನ್ನುಳಿದ ಶೇ.50ರಷ್ಟು ವಿದ್ಯುತ್‌ನ್ನು ಸೋಲಾರ್, ಪವನ ವಿದ್ಯುತ್‌ನಿಂದ ಪಡೆದು 640 ಕೋಟಿ ಲೀಟರ್ ಡೀಸೆಲ್ ಉಳಿತಾಯ ಮಾಡಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ 1659 ಕಿ.ಮೀ. ಹೊಸ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಶ್ರೀಲಂಕಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ. ಅದೇ ರೀತಿ ರೈಲ್ವೆ ಸುರಕ್ಷಾ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದು, ಒಟ್ಟಾರೆ 1,16,514 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಗಂಟೆಗೆ 130 ಕಿ. ಮೀ. ವೇಗದಲ್ಲಿ ವಂದೇ ಭಾರತ್ ರೈಲುಗಳು ಓಡಾಡುತ್ತಿರುವುದು ದೇಶ ಪ್ರಗತಿ ಪಥದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.