ಬೆಳಗಾವಿ: ಬಾಲಕಿಯನ್ನು ಪುಸಲಾಯಿಸಿ, ಬೆಳಗಾವಿ ಹೊರವಲಯದ ರೆಸಾರ್ಟ್ ಗೆ ಕರೆದೊಯ್ದ ಮೂವರು ಬಾಲಕರು, ಪಾರ್ಟಿ ಮಾಡಿದ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಮೇ 6ರಂದು ನಡೆದ ಘಟನೆ ಇದು. ಮೇ 12ರಂದು ಸೋಮವಾರ ಬಾಲಕಿಯ ಪೋಷಕರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಬಾಲಮಂದಿರಕ್ಕೆ ರವಾನಿಸಿದ್ದಾರೆ. ಇನ್ನೊಬ್ಬ ಹುಡುಗನಿಗೆ ಶೋಧ ಕಾರ್ಯ ನಡೆಯುತ್ತಿದೆ.
ಬಾಲಕಿಯ ಮನೆಯ ಸುತ್ತಲಿನ ಪ್ರದೇಶದಲ್ಲಿ ಹುಡುಗರು ಕೆಲಸ ಮಾಡಿಕೊಂಡಿದ್ದರು. ಪರಿಚಯ ಮಾಡಿಕೊಂಡು, ಪ್ರೇಮ ಬೆಳೆಸಿದ್ದಾರೆ. ಮೇ 6ರಂದು ನಗರ ಹೊರವಲಯದ ರೆಸಾರ್ಟ್ ಗೆ ಹೋಗಿ ಎಲ್ಲರೂ ಪಾರ್ಟಿ ಮಾಡಿದ್ದರು. ನಂತರ ಸಾಮೂಹಿಕ ಅತ್ಯಾಚಾರ ನಡೆದಿದೆ.
ಬಾಲಕಿ ಮಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದು, ರಜೆಗೆಂದು ಬೆಳಗಾವಿಗೆ ಬಂದಿದ್ದಳು. ಅತ್ಯಾಚಾರ ಎಸಗಿದ ಅಪ್ರಾಪ್ತ ಬಾಲಕರು ಬಾಲಕಿ ಮನೆಯ ಎದುರಿಗೆ ಓಡಾಡಿಕೊಂಡಿದ್ದರು. ಆಗ ಹುಡುಗಿಯೊಂದಿಗೆ ಪರಿಚಯ ಮಾಡಿಕೊಂಡು ಎಲ್ಲರೂ ಸಲುಗೆ ಬೆಳೆಸಿದ್ದರು. ಎರಡು ಮೂರು ಬಾರಿ ಪಾರ್ಟಿ ಕೂಡ ಮಾಡಿದ್ದಾರೆ. ನಾಲ್ಕನೇ ಬಾರಿಗೆ ರೆಸಾರ್ಟ್‌ಗೆ ಎಲ್ಲರೂ ಹೋಗಿ ಪಾರ್ಟಿ ಮಾಡಿದ್ದಾರೆ. ಮದ್ಯ ಸೇವಿಸಿದ ನಶೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಬಾಲಕಿ ಕೂಡ ನಡೆದ ಘಟನೆಯನ್ನು ತಿಳಿಸಿರಲಿಲ್ಲ. ಅನಾರೋಗ್ಯ ಉಂಟಾದಾಗ ಬಾಲಕಿ ತನ್ನ ತಾಯಿ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಳು. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತರ ಹೇಳಿಕೆ: “ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರನ್ನು ವಶಕ್ಕೆ ಪಡೆದು, ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಇಂದು ರಾತ್ರಿ ಮತ್ತೋರ್ವನನ್ನು ಪೊಲೀಸರು ಬಂಧಿಸಲಿದ್ದಾರೆ” ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಹಿತಿ ನೀಡಿದರು