ಬೆಂಗಳೂರು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ಅನ್ನು ರದ್ದುಪಡಿಸಿ, ಮತ್ತೆ ಹೊಸದಾಗಿ ಪರಿಗಣಿಸುವಂತೆ ಸೂಚನೆ ನೀಡಿರುವ ಆದೇಶದ ಕುರಿತು ಸ್ಪಷ್ಟನೆ ಮತ್ತು ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್ಗೆ ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿತು.
ಷರತ್ತು ಸಡಿಲಿಕೆ ಕೋರಿ ಮಧ್ಯಂತರ ಅರ್ಜಿ : ಪ್ರಕರಣ ಸಂಬಂಧ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಸಂಚರಿಸುವುದಕ್ಕೆ ಅವಕಾಶ ಇಲ್ಲವಾಗಿದೆ. ಆದ್ದರಿಂದ ಷರತ್ತುಗಳನ್ನು ಸಡಿಸಲಿಸಬೇಕು ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಕೋರಿದ್ದಾರೆ.
ಅರ್ಜಿದಾರರು ಷರತ್ತು ಉಲ್ಲಂಘಿಸಿದ್ದಾರೆಂದ ವಕೀಲರು : ಸರ್ಕಾರದ ಪರ ಹಾಜರಿದ್ದ ವಿಶೇಷ ಅಭಿಯೋಜಕ ಅಶೋಕ್ ನಾಯಕ್, ”ಅರ್ಜಿದಾರರು ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು ಎಂಬುದಾಗಿ ನ್ಯಾಯಾಲಯ ಷರತ್ತು ವಿಧಿಸಿದೆ. ಆದರೆ, ಈ ಷರತ್ತನ್ನು ಈಗಾಗಲೇ ಅರ್ಜಿದಾರರು ಉಲ್ಲಂಘಿಸಿದ್ದಾರೆ. ಅಲ್ಲದೆ, ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಈ ಅಂಶ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.