ಧಾರವಾಡ : ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದವ್ವ ಹನುಮಂತಪ್ಪ ದಾನಪ್ಪನವರ ಎಂಬುವರ ಮನೆ ಅಗ್ನಿಗಾಹುತಿಯಾಗಿದೆ.
ಮಧ್ಯಾಹ್ನ ಅಡುಗೆ ಮಾಡುವಾಗ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದ ಮನೆಯೊಳಗಿನ ಸಾಮಗ್ರಿಗಳೆಲ್ಲ ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಯಜಮಾನಿ ಸಿದ್ದವ್ವ ದಾನಪ್ಪನವರ ಮಾತನಾಡಿ, “ಜೋಗತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಸಂಬಂಧಿಕರು ಕೊಟ್ಟ ಹಣ ಕೂಡಿಟ್ಟಿದ್ದೆ. ಮನೆಯಲ್ಲಿ ಸಾರ್ವಜನಿಕರು ನೀಡಿದ ಕಾಳುಗಳಿದ್ದವು. ಒಂದು ಲಕ್ಷ ರೂಪಾಯಿ ಹಣವಿತ್ತು. ಮೊಮ್ಮಗಳ ಮದುವೆಗೆ ತಯಾರಿ ಮಾಡುತ್ತಿದ್ದರು. ಹೀಗಾಗಿ ಮದುವೆ ಸಾಮಗ್ರಿಗಳನ್ನು ಮನೆ ತಂದಿಡಲಾಗಿತ್ತು. ನಾನು ಕೆಲಸಕ್ಕೆ ಹೋಗಿದ್ದೆ. ಮನೆಯಲ್ಲಿ ಯಾರು ಇರಲಿಲ್ಲ, ಮೊಮ್ಮಕ್ಕಳು ಯಲ್ಲಮ್ಮನಗುಡ್ಡದ ಜಾತ್ರೆಗೆ ಹೋಗಿದ್ದರು. ಮನೆಯಲ್ಲಿನ ಸಾಮಗ್ರಿಗಳು ಇದೀಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ” ಎಂದು ಅಳಲು ತೋಡಿಕೊಂಡರು.