ಬೆಳಗಾವಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಂಡಿತು. ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಶಿವೇಂದ್ರರಾಜೇ ಭೋಸ್ಲೆ, ಶಾಸಕ ಅಭಯ್ ಪಾಟೀಲ ಸೇರಿ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು.
ಕಳೆದ ಐದಾರು ದಿನಗಳಿಂದ ಬೆಳಗಾವಿಯ ಅನಗೋಳದ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ವಿಶೇಷ ತಯಾರಿ ನಡೆಸಿದ್ದರು. ಆದರೆ, ಇದಕ್ಕೆ ಶ್ರೀರಾಮಸೇನಾ ಹಿಂದೂಸ್ಥಾನ ಸಂಘಟನೆ ರಮಾಕಾಂತ ಕೊಂಡೂಸ್ಕರ್ ಮತ್ತು ಅವರ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ, ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಲು ಪ್ರಯತ್ನಿಸಿದ್ದರು. ಅನುಮತಿಯನ್ನೂ ನೀಡಿರಲಿಲ್ಲ.
ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದ ಶಾಸಕ ಅಭಯ ಪಾಟೀಲ, ಭಾನುವಾರವೇ ಪ್ರತಿಮೆ ಅನಾವರಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಪ್ರಕಾರ ಅನಗೋಳ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸಿದರು. ಶೋಭಾ ಯಾತ್ರೆಯುದ್ದಕ್ಕೂ ಶಿವಾಜಿ, ಸಂಭಾಜಿ ಪರ ಘೋಷಣೆಗಳು ಮೊಳಗಿದವು. ಕೇಸರಿ ಸೀರೆ ತೊಟ್ಟಿದ್ದ ಮಹಿಳೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಡೋಲ್ ತಾಶಾಗಳ ಅಬ್ಬರ ಜೋರಾಗಿತ್ತು. ಎತ್ತ ನೋಡಿದರೂ ಜನಸಾಗರವೇ ಕಂಡು ಬಂತು. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಶಿವಭಕ್ತರು ಸಂಭ್ರಮಿಸಿದರು.