ಬೆಳಗಾವಿ : ಕೆಎಸ್ಆರ್ಟಿಸಿ ದರ ಪರಿಷ್ಕರಣೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮಹಿಳೆಯರಿಗೆ ಉಚಿತ ಬಸ್ ಭಾಗ್ಯ ನೀಡಿ, ಮತ್ತೊಂದೆಡೆ ಪುರುಷರಿಗೆ ಶೇ.15 ರಷ್ಟು ದರ ಏರಿಸುವ ಮೂಲಕ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ನೀತಿ ಹೇಗಿದೆ ಎಂದರೆ?- ಜನ ಹೇಳೋದು ಹೀಗೆ: ಈ ಬಗ್ಗೆ ಶೀಗಿಹಳ್ಳಿ ಗ್ರಾಮದ ಬಾಳೇಶ ಎಂಬುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ”ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಆಗಿದ್ದಕ್ಕೆ ಈ ರೀತಿ ಎಲ್ಲ ದರ ಹೆಚ್ಚಳ ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರಲು ಬರೀ ಮಹಿಳೆಯರಷ್ಟೇ ಮತ ಚಲಾಯಿಸಿದ್ದಾರಾ? ನಾವು ಇವರಿಗೆ ಮತ ಹಾಕಿಲ್ಲವೇ? ಕೇವಲ ಮಹಿಳೆಯರಿಗಷ್ಟೇ ಉಚಿತ ಕೊಟ್ಟರೆ ನಾವು ಏನು ಮಾಡಬೇಕು? ನಮ್ಮ ಕಡೆ ತೆಗೆದುಕೊಂಡು ಅವರಿಗೆ ಕೊಡುತ್ತಿದ್ದಾರೆ. ಇದು ಅಳಿಯ ಅಲ್ಲ ಮಗಳ ಗಂಡ ಎನ್ನುವಂತಾಗಿದೆ. ಈ ಸರ್ಕಾರ ಸರಿ ಇಲ್ಲ. ಇದರಿಂದ ಮನೆಯಲ್ಲಿ ಮಹಿಳೆಯರು ನಮ್ಮ ಮಾತು ಕೇಳದ ಸ್ಥಿತಿ ನಿರ್ಮಾಣ ಆಗಿದೆ” ಎಂದು ಕಿಡಿಕಾರಿದರು.