ವೆಲ್ಲೂರು,ತಮಿಳುನಾಡು: ವೆಲ್ಲೂರು ಜಿಲ್ಲೆಯ ಗುಡಿಯಾತಂನ ದುರ್ಗಮ್ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ 22 ವರ್ಷದ ಯುವತಿಯೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೆಲ್ಲೂರು ಜಿಲ್ಲಾಧಿಕಾರಿ ಸುಬ್ಬುಲಕ್ಷ್ಮಿ, ಚಿರತೆ ದಾಳಿಯಿಂದ ಅಂಜಲಿ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ, ಚಿರತೆ ಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರು ಭಯಮುಕ್ತರಾಗಿ ಬದುಕಲು ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿದ್ದಾರೆ.
ಘಟನೆಯ ಹಿನ್ನೆಲೆ: ವೆಲ್ಲೂರಿನ ಮೆಲ್ಮಾಯಿಲ್ ಪಂಚಾಯತ್ ವ್ಯಾಪ್ತಿಯ ದುರ್ಗಂ ಗ್ರಾಮದ ನಿವಾಸಿ ಶಿವಲಿಂಗಂ ಅವರಿಗೆ 5 ಹೆಣ್ಣುಮಕ್ಕಳಿದ್ದರು, ಅವರಲ್ಲಿ ನಾಲ್ವರು ವಿವಾಹಿತರಾಗಿದ್ದಾರೆ. ಚಿರತೆ ದಾಳಿಗೆ ಬಲಿಯಾಗಿರುವ ಅಂಜಲಿ 23 ಕುಟುಂಬದಲ್ಲಿ ಕಿರಿಯ ಮಗಳಾಗಿದ್ದಾಳೆ. ಪದವಿ ಪೂರ್ಣಗೊಳಿಸಿರುವ ಅಂಜಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಗೋವುಗಳನ್ನು ಮೇಯಿಸಲು ಒಂಟಿಯಾಗಿ ಸಂರಕ್ಷಿತ ಅರಣ್ಯಕ್ಕೆ ತೆರಳಿದ್ದಳು. ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದೇ ಇದ್ದಾಗ ಶಿವಲಿಂಗಂ ಅವರನ್ನು ಹುಡುಕಿಕೊಂಡು ಕಾಡಿಗೆ ತೆರಳಿದ್ದರು. ಈ ವೇಳೆ ಮಗಳು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಆಘಾತಗೊಂಡರು. ಕೂಡಲೇ ಅಕ್ಕಪಕ್ಕದವರಿಗೆ ಚಿರತೆ ದಾಳಿಯಿಂದ ಮಗಳು ಮೃತಪಟ್ಟಿರುವ ಸುದ್ದಿ ಮುಟ್ಟಿಸಿದರು. ಸ್ಥಳೀಯರು ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಕೆ.ವಿ.ಕುಪ್ಪಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಧಾವಿಸಿ ಬಂದು ಪರಿಶೀಲನೆ ನಡೆಸಿದ್ದಾರೆ.