ಬೆಳಗಾವಿ : ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಾನು ಎಂದಿಗೂ ಸಮುದಾಯದ ಪರ ನಿಲ್ಲುತ್ತೇನೆ. ಅಧಿಕಾರಕ್ಕಿಂತ ಸಮಾಜದ ಹಿತಾಸಕ್ತಿ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸುವರ್ಣ ಸೌಧದ ಮುಂಭಾಗ ಮಂಗಳವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ವಕೀಲರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಚಿವರು, ಸಮಾಜಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು.
ಸಮಾಜ ಇದ್ದರೆ ನಾವೆಲ್ಲ ಇರುತ್ತೇವೆ. ಮುಖಂಡರಿಗೆ ಎಲ್ಲ ವಿಚಾರ ಹೇಳಿದ್ದೇನೆ. ಸರಕಾರ ಯಾವುದೇ ಇರಲಿ, ಪಂಚಮಸಾಲಿ ಸಮಾಜದ ಬಹಳಷ್ಟು ಜನ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸಮಾಜಕ್ಕೆ ನ್ಯಾಯ ಸಿಗಬೇಕು. ಹಿಂದೆಯೂ ಇದೇ ದಾಟಿಯಲ್ಲಿ ಮಾತನಾಡಿದ್ದೇನೆ. ಇಂದೂ ಅದೇ ದಾಟಿಯಲ್ಲಿ ಮಾತನಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಮಾಜದ ಮಗಳಾಗಿ ಹೇಳುವೆ, ನನ್ನ ಸಮಾಜಕ್ಕೆ ನ್ಯಾಯಸಿಗಬೇಕು. ಮೀಸಲಾತಿ ವಿಚಾರವಾಗಿ ಪದೇ ಪದೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಸಮಾಜ ಹೇಳುವ ದಿಕ್ಕಿನಲ್ಲೇ ನಾನೂ ಸಾಗುತ್ತೇನೆ. 2 ಎ ಮೀಸಲಾತಿ ಸಿಗಲಿ, ಖಂಡಿತ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.