ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 28 ಬಂಡಾಯ ಅಭ್ಯರ್ಥಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಅಮಾನತು ಮಾಡಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಎಫ್. ಪಟೋಲೆ ಆದೇಶಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಎರಡು ಪ್ರತ್ಯೇಕ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 21 ಅಭ್ಯರ್ಥಿಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇತರ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವವರ ಪಟ್ಟಿಯಲ್ಲಿ ಶ್ಯಾಮಕಾಂತ್ ಸಾನೆರ್ (ಸಿಂಧಖೇಡಾ), ರಾಜೇಂದ್ರ ಠಾಕೂರ್ (ಶ್ರೀವರ್ಧನ್), ಅಬಾ ಬಾಗುಲ್ (ಪಾರ್ವತಿ), ಮನೀಶ್ ಆನಂದ್ (ಶಿವಾಜಿನಗರ), ಸುರೇಶಕುಮಾರ್ ಜೇಥಾಲಿಯಾ ಮತ್ತು ಕಲ್ಯಾಣ್ ಬೊರಾಡೆ (ಪರ್ತೂರ್) ಮತ್ತು ಚಂದ್ರಪಾಲ್ ಚೌಕ್ಸೆ (ರಾಮ್ಟೆಕ್) ಸೇರಿದ್ದಾರೆ.
ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಕ್ಕಾಗಿ ಆರು ಮಹಿಳೆಯರು ಸೇರಿದಂತೆ 21 ಮಂದಿ ಅಮಾನತುಗೊಂಡಿದ್ದಾರೆ.
Laxmi News 24×7