ಬೆಳಗಾವಿ: ಶ್ರೀರೇಣುಕಾ ಯಲ್ಲಮ್ಮ ದೇವಿ ಸನ್ನಿಧಿಗೆ ಪ್ರತೀ ವರ್ಷ 1.5 ಯಿಂದ 2 ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆ ರೂಪಿಸಬೇಕು. ಹಾಗೆಯೇ ಬರುವ ಭಕ್ತರಿಗೆ ತಾಯಿಯ ದರ್ಶನ ಕಡ್ಡಾಯ ಸಿಗುವ ವ್ಯವಸ್ಥೆಯ ಪ್ರಥಮ ಆದ್ಯತೆಯಲ್ಲಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ರವಿವಾರ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿ ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ದೇವಿಯ ದರ್ಶನದ ಖಾತ್ರಿಯಾದರೆ, ಪ್ರವಾಸಿಗರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.
ಕ್ಷೇತ್ರಕ್ಕೆ ಬರುವ ಭಕ್ತರ ಆರೋಗ್ಯಕ್ಕೆ ಪೂರಕ ವ್ಯವಸ್ಥೆಗಳ ಕಲ್ಪಿಸಬೇಕು. ಕ್ಷೇತ್ರಕ್ಕೆ ಬಡವರು, ಶ್ರಮಿಕರು, ತಳ ಸಮುದಾಯದವರು, ಮಹಿಳೆಯರು ಮತ್ತು ದುಡಿಯುವ ವರ್ಗದವರೇ ಹೆಚ್ಚಾಗಿ ಬರುತ್ತಾರೆ ಆದ್ದರಿಂದ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಉಳಿಯಲು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಬೇಕು. ತಿರುಪತಿ, ಧರ್ಮಸ್ಥಳ ಮಾದರಿಯಲ್ಲಿ ವ್ಯವಸ್ಥೆಗಳ ಕಲ್ಪಿಸಬೇಕು ಎಂದು ಹೇಳಿದರು.