ಬೈಲಹೊಂಗಲ: ಕ್ಷುಲ್ಲಕ ಕಾರಣಕ್ಕೆ ಸಹೋದರಿಯರಿಬ್ಬರ ನಡುವೆ ಮಾತಿನ ಚಕಮಕಿಗೊಂಡು, ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಅಮಟೂರ ಬೇವಿನಕೊಪ್ಪ ರಸ್ತೆ ಮಧ್ಯೆದಲ್ಲಿ ಸೋಮವಾರ (ಸೆ.30) ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಅಮಟೂರ ಗ್ರಾಮದ ಕೇದಾರಿ ಯಲ್ಲಪ್ಪ ಅಂಗಡಿ (42) ಎಂದು ಗುರುತಿಸಲಾಗಿದೆ.
ತಮ್ಮ ಜಮೀನಿನಲ್ಲಿ ಬೇರೆಯವರಿಗೆ ದಾಟಲು ಅನುವು ಮಾಡಿಕೊಟ್ಟಿದ್ದಕ್ಕೆ ಚಾಕುವಿನಿಂದ ಇರಿದ ಪರಿಣಾಮವಾಗಿ ತೀವ್ರವಾಗಿ ರಕ್ತಸ್ರಾವಗೊಂಡಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಆರೋಪಿಗಳಾದ ಬಾಳಪ್ಪ ಶಿವಾನಂದ ಅಂಗಡಿ (21), ಶಿವಾನಂದ ಬಾಳಪ್ಪ ಅಂಗಡಿ (51), ಆತ್ಮಾನಂದ ಶಿವಾನಂದ ಅಂಗಡಿ (15) ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಮೂರು ಜನ ಪಿಎಸ್‍ಐ ನೇತೃತ್ವದಲ್ಲಿ ತಂಡ ರಚಿಸಿ ಜಾಲ ಬೀಸಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.