ಬೆಳಗಾವಿ: ತಿರುಪತಿ ಲಡ್ಡು ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿರುವ ಹೇಳಿಕೆಯಿಂದ ದೇಶದಲ್ಲಿ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ನಂದಿನಿ ಉತ್ಪನ್ನದ ಗುಣಮಟ್ಟದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಸೇರ್ಪಡೆಯಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ. ಆ ಆರೋಪ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಆದರೆ ಇಡೀ ದೇಶದಲ್ಲಿ ಕೆಎಂಎಫ್‌ನ ನಂದಿನಿ ತುಪ್ಪದ ಬಗ್ಗೆ ಮಾತನಾಡುವಂತಾಗಿದೆ. ನಮ್ಮ ತುಪ್ಪಕ್ಕೆ ಬೇಡಿಕೆಯೂ ಹೆಚ್ಚಳವಾಗಿದೆ. ಹೀಗಾಗಿ ನಾವು ನಾಯ್ಡು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.
ನನ್ನ ಅಧಿಕಾರವಧಿಯಲ್ಲಿ 4 ವರ್ಷದ ಹಿಂದೆ ಕೆಎಂಎಫ್‌ನ ನಂದಿನಿ ತುಪ್ಪ ಲಡ್ಡು ಪ್ರಸಾದಕ್ಕೆ ಪೂರೈಕೆಯಾಗುತ್ತಿತ್ತು. ಆದರೆ ತಿರುಪತಿ ಟ್ರಸ್ಟ್ ಚೇರ್‌ಮನ್ ಬದಲಾವಣೆ ಆಗಿದ್ದರಿಂದ ಟೆಂಡರ್ ಕರೆಯಲಾಯಿತು. ಕಡಿಮೆ ಬೆಲೆಗೆ ನಂದಿನಿ ತುಪ್ಪ ಪೂರೈಕೆ ಮಾಡುವಂತೆ ಕೇಳಿದ್ದರು. ನಾವು ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಕಡಿಮೆ ಬೆಲೆಗೆ ಕೊಡಲಿಲ್ಲ. ಬಳಿಕ ಖಾಸಗಿ ಕಂಪೆನಿಗೆ ಟೆಂಡರ್ ನೀಡಲಾಯಿತು ಎಂದರು.