ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 68 ವರ್ಷ ಗತಿಸಿವೆ. ಪ್ರತಿ 50 ವರ್ಷಕ್ಕೆ ಡ್ಯಾಂ ಗೇಟ್‌ಗಳನ್ನು ಬದಲಿಸಬೇಕು. ಆದರೆ ತುಂಗಭದ್ರಾ ಡ್ಯಾಂ ಗೇಟ್ ನಿರ್ವಹಣೆ ಸರಿಯಾಗಿ ಮಾಡಿದ್ದರಿಂದ 68 ವರ್ಷಗಳ ಬಾಳಿಕೆ ಬಂದಿದೆ. ಗೇಟ್ ಮುರಿದ ಬಳಿಕ ತಜ್ಞರ ಸಮಿತಿ ರಚಿಸಿದ್ದು, ಅವರು ಕೊಟ್ಟಿರುವ ವರದಿ ಅನುಸಾರ ಮುಂದೆ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ಯಾಂ ಗೇಟ್ ಮುರಿದಾಗ ರೈತರಿಗೆ ತುಂಬಾ ಆತಂಕವಿತ್ತು. ಡ್ಯಾಂನಿಂದ 20 ಟಿಎಂಸಿಗೂ ಹೆಚ್ಚಿನ ನೀರು ಹರಿದು ಹೋಗಿತ್ತು. ಆಗ ಡ್ಯಾಂಗೆ ಭೇಟಿ ನೀಡಿದ್ದೆ. ಗೇಟ್ ರಿಪೇರಿಯಾಗಿ ಮತ್ತೆ ಡ್ಯಾಂ ತುಂಬುತ್ತದೆ ಎಂದಿದ್ದೆ. ಮಳೆಯ ಕೃಪೆಯಿಂದಾಗಿ ಮತ್ತೆ ಜಲಾಶಯ ತುಂಬಿದೆ. ಮುಂಗಾರಿನ ಬೆಳೆಗೆ ನೀರು ದೊರೆಯುತ್ತದೆ. ಹಿಂಗಾರು ಬೆಳೆಗೂ ನೀರು ಲಭಿಸುವ ಭರವಸೆಯಿದೆ ಎಂದರು.
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹಾಗೂ ಅಧಿಕಾರಿಗಳ ತಂಡದ ಶ್ರಮದಿಂದ ಗೇಟ್ ದುರಸ್ತಿ ಮಾಡಲಾಯಿತು. ಹಿಂದುಸ್ಥಾನ್, ನಾರಾಯಣ, ಜಿಂದಾಲ್ ಸಂಸ್ಥೆಗಳ ಸಹಾಯವೂ ದೊರೆಯಿತು. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತೆ ಮಳೆ ಬಂದು ತುಂಗಭದ್ರೆ ತುಂಬಿದ್ದರಿಂದ ರೈತರಲ್ಲಿ ಸಂತಸ ತಂದಿದೆ. ಮಳೆರಾಯನಿಗೆ ಸರಕಾರದ ಪರವಾಗಿ ಧನ್ಯವಾದ ಹೇಳುವೆ ಎಂದರು.
Laxmi News 24×7