ಬೆಳಗಾವಿ: ‘ಪಂಚಮಸಾಲಿ ಸಮಾಜವನ್ನು ಎಲ್ಲರೂ ಬಳಸಿಕೊಂಡರು, ಬೆಳೆದರು. ಆದರೆ, ಸಮಾಜವನ್ನು ಹಿಂದಕ್ಕೆ ತಳ್ಳಿದರು. ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವವರೆಗೂ ನಾವು ವಿಶ್ರಮಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆಯ ಅವಕಾಶ ಕೊಡುತ್ತಿದ್ದೇವೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ನೀಡಬೇಕು ಎಂದು ಆಗ್ರಹಿಸಿ, ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾಜದ ವಕೀಲರ ರಾಜ್ಯಮಟ್ಟದ ಪರಿಷತ್‌ನಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜಕ್ಕೆ ವಕೀಲರೇ ತಾಯಿ ಇದ್ದ ಹಾಗೆ. ವಕೀಲರು ಹೋರಾಟ ಮಾಡಿದ್ದಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮೀಸಲಾತಿ ದೊಡ್ಡದೇನಲ್ಲ’ ಎಂದರು.
‘ಮೀಸಲಾತಿಗೆ ನಾವು ಕೋರ್ಟ್‌ಗೆ ಹೋದರೆ ದಶಕಗಳೇ ಉರುಳುತ್ತವೆ. ಅದರ ಬದಲು ರಾಜ್ಯಮಟ್ಟದ ವಕೀಲರ ಬಲಿಷ್ಠ ಪರಿಷತ್ ರಚಿಸಲಾಗಿದೆ. ಕಾನೂನಾತ್ಮಕ ಸಲಹೆ ಪಡೆದು ಸರ್ಕಾರದ ಕಿವಿ ಹಿಂಡಲಾಗುವುದು’ ಎಂದೂ ಕರೆ ನೀಡಿದರು.
‘ನನ್ನ ಜತೆ ವೇದಿಕೆ ಹಂಚಿಕೊಂಡ ಬಹಳ ನಾಯಕರು ರಾಜಕೀಯವಾಗಿ ಬೆಳೆದರು. ಆದರೆ, ಸಮಾಜದ ಉಪಕಾರ ತೀರಿಸಲಿಲ್ಲ. ನಾನು ಮಠ ಬಿಟ್ಟು, ಪೀಠ ಬಿಟ್ಟು ಜನರಿಗಾಗಿಯೇ ಬೀದಿಗೆ ಇಳಿದಿದ್ದೇನೆ. ವಕೀಲರೂ ಕೈ ಜೋಡಿಸಿದರೆ ನಮ್ಮ ಹೋರಾಟಕ್ಕೆ ಜಯ ಸಿಗುವುದು ಖಚಿತ’ ಎಂದರು.
ವಕೀಲ ಎಂ.ಬಿ.ಝಿರಲಿ ಮಾತನಾಡಿ, ‘ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಆಯೋಗವು ಮೊದಲು ಸಮೀಕ್ಷೆ ನಡೆಸಬೇಕು. ಸಾಧ್ಯತೆಗಳ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಯಾವ ಮುಖ್ಯಮಂತ್ರಿ ಏನು ಭರವಸೆ ನೀಡಿದರೂ ವ್ಯರ್ಥವೇ. ನಾವು ಮೊದಲು ಅದಕ್ಕಾಗಿ ಹೋರಾಡಬೇಕು’ ಎಂದು ಸಲಹೆ ನೀಡಿದರು.
Laxmi News 24×7