ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆಯ ಬಗ್ಗೆ ಭಾರಿ ವಿವಾದದ ಮಧ್ಯೆ, ದೇಶೀಯ ಡೈರಿ ದೈತ್ಯ ಅಮುಲ್ ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಂ (TTD)ಗೆ ತುಪ್ಪವನ್ನು ಎಂದಿಗೂ ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಆನ್ಲೈನ್ನಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನ ಪರಿಹರಿಸಲು ಹೇಳಿಕೆ ಬಿಡುಗಡೆ ಮಾಡಿದ ಅಮುಲ್, ಎಂದಿಗೂ ಟಿಟಿಡಿಗೆ ಅಮುಲ್ ತುಪ್ಪವನ್ನು ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿದೆ.
“ನಾವು ಟಿಟಿಡಿಗೆ ಅಮುಲ್ ತುಪ್ಪವನ್ನು ಎಂದಿಗೂ ಪೂರೈಸಿಲ್ಲ ಎಂದು ತಿಳಿಸಲು ನಾವು ಬಯಸುತ್ತೇವೆ” ಎಂದು ಕಂಪನಿ ಹೇಳಿದೆ. ಈ ಮೂಲಕ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಅಮುಲ್ ಉತ್ಪನ್ನಗಳನ್ನು ಬಳಸಲಾಗಿದೆ ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದೆ.
50 ವರ್ಷಗಳಿಂದ ಭಾರತದಲ್ಲಿ ಮನೆಮಾತಾಗಿರುವ ತಮ್ಮ ತುಪ್ಪವನ್ನ ತಯಾರಿಸುವಲ್ಲಿ ಅವರು ಅನುಸರಿಸುವ ಕಠಿಣ ಉತ್ಪಾದನಾ ಮಾನದಂಡಗಳನ್ನ ಅಮುಲ್ ಸ್ಪಷ್ಟಪಡಿಸಿದೆ. “ಅಮುಲ್ ತುಪ್ಪವನ್ನು ಐಎಸ್‌ಒ ಪ್ರಮಾಣೀಕರಿಸಿದ ನಮ್ಮ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳಲ್ಲಿ ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ” ಎಂದು ಹೇಳಿಕೆಯಲ್ಲಿ ಒತ್ತಿಹೇಳಲಾಗಿದೆ. ತಮ್ಮ ಉತ್ಪನ್ನಗಳಿಗೆ ಬಳಸುವ ಹಾಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರ್ಗಸೂಚಿಗಳ ಪ್ರಕಾರ ಕಲಬೆರಕೆ ಪರೀಕ್ಷೆಗಳು ಸೇರಿದಂತೆ ಕಠಿಣ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ ಎಂದು ಅಮುಲ್ ಎತ್ತಿ ತೋರಿಸಿದೆ.