ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ವಿರುದ್ಧದ ಆರೋಪ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸರಕಾರದಲ್ಲಿ ಗೊಂದಲಗಳು ಶುರುವಾಗಿವೆ. ಕೆಲವು ಹಿರಿಯ ಸಚಿವರು ಸೇರಿ ಅರ್ಧ ಡಜನ್‌ಗೂ ಹೆಚ್ಚು ನಾಯಕರು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಈ ಇಡೀ ರಾಜಕೀಯ ಬೆಳವಣಿಗೆಯ ಕೇಂದ್ರಬಿಂದು ಸ್ವತಃ ಸರಕಾರದ ಭಾಗವಾಗಿರುವ ರಾಜ್ಯ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು.
“ಸಚಿವನಾಗಿ ನಾನೂ ದಣಿದಿದ್ದೇನೆ. ಇನ್ನೇನಿದ್ದರೂ ಸಿಎಂ ಆಗಬೇಕು’ ಎಂದು ಈಚೆಗೆ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ ಹೇಳಿಕೆ ನೀಡುವ ಮೂಲಕ ರಾಜಕಾರಣದಲ್ಲಿ “ಸಂಚಲನ’ ಮೂಡಿಸಿದ್ದರು. ಈ ಬಾರಿ ಸಂಪುಟದಲ್ಲೂ ಸ್ಥಾನ ಸಿಗದ ದೇಶಪಾಂಡೆ ಅವರು ನಿಜವಾಗಿಯೂ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಿಎಂ ಹುದ್ದೆ ಇವೆರಡರಲ್ಲಿ ಯಾವುದಕ್ಕೆ ಅವರು ಸಿದ್ಧರಾಗಿದ್ದಾರೆ? ಸರಕಾರದಲ್ಲಿ ಎಲ್ಲವೂ ಸರಿಯಾಗಿದೆಯೇ? ಇಂತಹ ಹಲವು ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
9 ಬಾರಿ ಶಾಸಕರಾಗಿ, ಒಮ್ಮೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನಿಮ್ಮನ್ನು ಸಂಪುಟದಿಂದ ಹೊರಗಿಡ ಲಾಗಿದೆ. ನೀವು ಈಗ ಸಿಎಂ ಆಕಾಂಕ್ಷಿ ಅಂತ ಹೇಳುತ್ತಿದ್ದೀರಲ್ಲ?
ನಾನು 9 ಬಾರಿ ಶಾಸಕನಾಗಲಿ ಅಥವಾ 14 ಬಾರಿಯಾದರೂ ಗೆದ್ದು ಬರಲಿ. ಪ್ರತೀ ಬಾರಿ ನಾನು ಸಂಪುಟ ಸಚಿವನಾಗಿ ಇರಲೇಬೇಕೆಂಬ ನಿಯಮ ಏನೂ ಇಲ್ಲ.
ಸಚಿವ ಹುದ್ದೆ ಎನ್ನು ವುದು ನನ್ನ ಜನ್ಮಸಿದ್ಧ ಹಕ್ಕೂ ಅಲ್ಲ. ಸಚಿವ ಸಂಪುಟ ರಚನೆ ಮಾಡುವ ಮುಖ್ಯಮಂತ್ರಿಗಳು ಅವರು ಹಲವು ಅಂಶಗಳನ್ನು ಪರಿಗಣಿಸಿ, ಅಳೆದು ತೂಗಿ ರಚನೆ ಮಾಡಿರುತ್ತಾರೆ. ಅದರಂತೆ ಸಂಪುಟ ಸಚಿವರು ಕೆಲಸ ಮಾಡುತ್ತಿದ್ದಾರೆ.