ಚನ್ನಮ್ಮನ ಕಿತ್ತೂರು: ‘ಅ. 23 ರಿಂದ 25 ರವರೆಗೆ ಆಚರಿಸುವ ‘ರಾಣಿ ಚನ್ನಮ್ಮನ ಕಿತ್ತೂರು ಉತ್ಸವ’ದ ಅಂಗವಾಗಿ ಬೆಳಗಾವಿ ನಗರದವರ ಬೇಡಿಕೆಯಂತೆ ಒಂದು ದಿನ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಮಾಹಿತಿ ನೀಡಿದರು.
ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಕಿತ್ತೂರಲ್ಲಿಯೂ ಮೂರು ದಿನ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ’ ಎಂದರು.
‘ಬಾಲಿವುಡ್ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಮಂತ್ರಿಸುವ ಚಿಂತನೆ ನಡೆದಿದೆ. ದೇಶದ ವಿವಿಧೆಡೆಯ ತಿಂಡಿ, ತಿನಿಸು ಪರಿಚಯಿಸುವ ‘ಫುಡ್ ಕೋರ್ಟ್’, ಏರ್ ಷೋ ಪ್ರಸಕ್ತ ಸಾಲಿನ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ’ ಎಂದರು.
‘ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ಜರುಗಲಿವೆ. ಶಾಸಕನಾಗಿ ಯಾವುದೇ ಕಲಾವಿದರ ಬಗ್ಗೆ ಶಿಪಾರಸ್ಸು ಮಾಡಲು ಹೋಗುವುದಿಲ್ಲ. ಉತ್ತಮ ಕಲಾವಿದರ ಆಯ್ಕೆಯನ್ನು ಅಧಿಕಾರಿ ವರ್ಗಕ್ಕೆ ಬಿಡಲಾಗಿದೆ. ಉತ್ತಮ ಪ್ರದರ್ಶನವನ್ನು ವೀಕ್ಷಕರು ಸವಿಯಬೇಕು ಎಂಬುದು ನನ್ನ ಉದ್ದೇಶವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.