ಬೆಂಗಳೂರು: ರಾಜ್ಯ ಬಿಜೆಪಿಯ ಒಳ ಬೇಗುದಿ ಶಮನಕ್ಕಾಗಿ ಕೊನೆಗೂ ಆರೆಸ್ಸೆಸ್ ಮಧ್ಯಪ್ರವೇಶ ಮಾಡಿದ್ದು, ಗುರುವಾರ ಸಂಘದ ಮುಖಂಡರು ಬಿಜೆಪಿ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಲು ನಿರ್ಧರಿಸಿದ್ದಾರೆ.
ಆರೆಸ್ಸೆಸ್ ವರಿಷ್ಠರಾದ ಬಿ.ಎಲ್. ಸಂತೋಷ್, ಮುಕುಂದ್, ಸುಧೀರ್ ಸಹಿತ ಹಿರಿಯರು ಭಾಗಿಯಾಗಲಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಡಾ| ರಾಧಾ ಮೋಹನ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.
ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಂಡಾಯದ ಪತಾಕೆ ಹಾರಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪಸಿಂಹ, ಅರವಿಂದ ಲಿಂಬಾವಳಿ, ತಟಸ್ಥ ಬಣದ ಸಿ.ಟಿ. ರವಿ, ವಿ. ಸುನಿಲ್ ಕುಮಾರ್, ಅರವಿಂದ ಬೆಲ್ಲದ್ ಸಹಿತ ಸುಮಾರು 40 ಬಿಜೆಪಿ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಚನ್ನೇನಹಳ್ಳಿಯಲ್ಲಿರುವ ಆರೆಸ್ಸೆಸ್ ಕಚೇರಿಯಲ್ಲಿ ಬೆಳಗ್ಗಿನ ಉಪಾಹಾರದೊಂದಿಗೆ ಸಭೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದವರೆಗೆ ಚರ್ಚೆ, ಸಂವಾದ ನಡೆಯಲಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಪಕ್ಷ ಹಾಗೂ ಸಂಘ ನಿರಾಕರಿಸಿವೆ. ವರ್ಷದಲ್ಲಿ ಎರಡು ಬಾರಿ ಬಿಜೆಪಿ ನಾಯಕರ ಜತೆಗೆ ಬೈಠಕ್ ನಡೆಸುವುದು ವಾಡಿಕೆ. ಇದು ಸಂಘಟನೆ ಹಾಗೂ ಪಕ್ಷದ ಆಂತರಿಕ ವ್ಯವಸ್ಥೆಯಾಗಿದ್ದು, ರಾಜಕೀಯದ ಬಣ್ಣ ನೀಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನೆ ಮಾಡಲಾಗಿದೆ.
ಕಿವಿ ಹಿಂಡಲಿದೆಯೇ ಆರೆಸ್ಸೆಸ್?
ಬಿಜೆಪಿ ಮೂಲಗಳ ಪ್ರಕಾರ ರಾಜ್ಯ ನಾಯಕತ್ವದ ವಿರುದ್ಧ ಪಕ್ಷದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘ ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಕ್ಷಕ್ಕೆ ರಾಜಕೀಯವಾಗಿ ಹಿನ್ನಡೆಯಾಗಬಹುದೆಂಬ ಕಾರಣದಿಂದ ನಾಯಕರ ಕಿವಿ ಹಿಂಡುವುದಕ್ಕಾಗಿ ಸಭೆ ಆಯೋಜಿಸಲಾಗಿದೆ.
ಪ್ರಸ್ತುತ ವಿದ್ಯಮಾನ ವಿಶ್ಲೇಷಣೆ
ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ಬಿಜೆಪಿಯ ಘಟಾನುಘಟಿ ನಾಯಕರ ಅನುಪಸ್ಥಿತಿಯಲ್ಲಿ ಕಿರಿಯರು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಒಂದಷ್ಟು ಅಭಿಪ್ರಾಯ ವ್ಯತ್ಯಾಸ, ಆಕ್ಷೇಪ, ನಡಾವಳಿಗಳ ಬಗ್ಗೆ ಟೀಕೆ, ರಾಜಕೀಯ ಮಹತ್ವಾಕಾಂಕ್ಷೆಗಳು ಅನಾವರಣಗೊಳ್ಳುವುದು ಸಹಜ. ಆದರೆ ಇದು ಪಕ್ಷದ ಒಟ್ಟು ವ್ಯವಸ್ಥೆ ಹಾಗೂ ಭವಿಷ್ಯಕ್ಕೆ ಮಾರಕವಾಗಬಾರದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ನಡೆಸಲು ನಿರ್ಧರಿಸಲಾಗಿದೆ. ಕಳೆದ ತಿಂಗಳು 19 ಅಥವಾ 21ರಂದು ಈ ಸಭೆ ನಡೆಯುವುದಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ಮುಂದೂಡಿಕೆಯಾಗಿತ್ತು. ಈ ಸಭೆ ಪಕ್ಷದ ಪ್ರಸಕ್ತ ವಿದ್ಯಮಾನಗಳ ಸುತ್ತ ನಡೆಯಲಿದೆ ಎಂದು ಹೇಳಲಾಗಿದೆ