ಬಳ್ಳಾರಿ ಜೈಲಿಗೆ ಬಂದ ಗಣೇಶ: ‘ದರ್ಶನ್’ಗೆ ಭಾಗ್ಯ ಇಲ್ಲ
ದೇಶದೆಲ್ಲೆಡೆ ಇಂದು ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಗಣೇಶನನ್ನು ಪೂಜಿಸುವ ಭಾಗ್ಯ ಇಲ್ಲ. ಇದರಿಂದ ದರ್ಶನ್ ಬೇಸರಗೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಪ್ರತೀ ವರ್ಷ ಗಣೇಶ ಚತುರ್ಥಿಯಲ್ಲಿ ಭಾಗಿಯಾಗುತ್ತಿದ್ದ ದರ್ಶನ್ ಈ ಬಾರಿ ಅದನ್ನು ಮಿಸ್ ಮಾಡಿಕೊಂಡಿದ್ದಾರೆ.
ಹೌದು…. ಬಳ್ಳಾರಿ ಜೈಲಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಜೈಲನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ಬಳ್ಳಾರಿ ಜೈಲು ಹೂವು, ಬಾಳೆ ಕಂಬ, ಹಣ್ಣು, ಮಾವಿನ ಎಲೆ, ಬಲೂನ್, ಲೈಟಿಂಗ್‌ನಿಂದ ಕಂಗೊಳಿಸುತ್ತಿದೆ. ಅಲ್ಲದೆ ಕೈದಿಗಳಿಗೆ ಸಿಹಿ ತಿಂಡಿ ಊಟವನ್ನು ಇವತ್ತು ನೀಡಲಾಗಿದೆ. ಮೋದಕ, ಬೆಲ್ಲದ ಕಡುಬು, ರವೆ ಪಾಯಿಸ ನೀಡಲಾಗಿದೆಯಂತೆ. ಜೈಲಿನಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿರುವಾಗ ದರ್ಶನ್ ಅವರಿಗೆ ಗಣೇಶನ ದರ್ಶನ ಹಾಗೂ ಪೂಜೆ ಅವಕಾಶ ಸಿಕ್ಕಿರಬಹುದು ಅಂತ ಅನಿಸಬಹುದು. ಆದರೆ ಜೈಲಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದರೂ ದರ್ಶನ್‌ಗೆ ಗಣೇಶನ ವಿಗ್ರಹವನ್ನು ನೋಡುವ ಅವಕಾಶ ನೀಡಲಾಗಿಲ್ಲ.
ಇಂದು ಬೆಳಗ್ಗೆ ಗಣೇಶನ ವಿಗ್ರಹವನ್ನಿಟ್ಟು ಪೂಜೆ ಮಾಡಲಾಗಿದೆ. ಪ್ರತಿ ವರ್ಷ ಬಳ್ಳಾರಿ ಜೈಲಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಜೈಲು ಸಿಬ್ಬಂದಿಗಳು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ, ಕೈದಿಗಳು ಅಲಂಕಾರ ಮಾಡಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅಲಂಕಾರಕ್ಕೆ ಮಾತ್ರ ಕೈದಿಗಳಿಗೆ ತಿಳಿಸಲಾಗಿದ್ದು ಸಿಬ್ಬಂದಿಗಳು ಮಾತ್ರ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
Laxmi News 24×7