ಕುಷ್ಟಗಿ: ಕೃಷ್ಣಾ ನದಿ ತುಂಬಿ ಹರಿದರೆ ಈ ಭಾಗದ ಜನರಲ್ಲಿ ಸಂತಸ ಮನೆಮಾಡುತ್ತದೆ. ಕಾರಣವೆಂದರೆ ಕೃಷ್ಣಾ ಭಾಗ್ಯ ಜಲನಿಗಮ ಕೈಗೆತ್ತಿಕೊಂಡಿರುವ ಕೊಪ್ಪಳ ಏತ ನೀರಾರಿ ಯೋಜನೆಯಲ್ಲಿನ ಕೆರೆ ತುಂಬಿಸುವ ಉಪ ಯೋಜನೆಯಲ್ಲಿ ತಮ್ಮೂರಿನ ಕೆರೆಗಳೂ ಭರ್ತಿಯಾಗುತ್ತವೆ ಎಂಬ ಆಶಯ.
ಆದರೆ ಯೋಜನೆಗೆ ಸಮಸ್ಯೆಗಳು ಸಾಲುಸಾಲಾಗಿ ಎದುರಾಗುತ್ತಿದ್ದು, ಯೋಜನೆ ಪೂರ್ಣಗೊಂಡಿಲ್ಲ.
ಜುಲೈನಲ್ಲಿ ಕೃಷ್ಣಾ ನದಿ ಉಕ್ಕಿ ಹರಿದು ಆಲಮಟ್ಟಿ ಜಲಾಶಯ ಭರ್ತಿಯಾಗಿ ಸಾಕಷ್ಟು ನೀರು ನದಿಗೆ ಹರಿದುಹೋಯಿತು. ಜುಲೈ 15ರಂದು ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಬೇಕಿತ್ತು. ಆದರೆ 2 ತಿಂಗಳಾದರೂ ಇಲ್ಲಿಯ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಕೆರೆಗಳಿಗೆ ಕನಿಷ್ಠ ಕೃಷ್ಣಾ ನೀರು ಹರಿಸಿದ್ದರೆ ಅಂತರ್ಜಲ ಹೆಚ್ಚಳವಾಗುತ್ತಿತ್ತು ಎಂಬುದು ರೈತರ ಆಶಯವಾಗಿತ್ತು.
ಜುಲೈನಲ್ಲಿ ನೀರು ಹರಿಸಲು ಕೆಬಿಜೆಎನ್‌ಎಲ್ ಮುಂದಾದರೂ ಮುದೂಟಗಿ ಬಳಿ, ಬಲಕುಂದಿ ಬಳಿಯ ಮುಖ್ಯ ಕೊಳವೆಗಳು ಒಡೆದಿದ್ದರಿಂದ ತೊಡಕಾಗಿತ್ತು. ನಂತರ ನೀರು ಹರಿಸಬೇಕು ಎನ್ನುವಷ್ಟರಲ್ಲಿ ಭೂ ಸ್ವಾಧೀನ ಪರಿಹಾರ ಬಂದಿಲ್ಲ ಎಂಬ ಕಾರಣಕ್ಕೆ ಕಲಾಲಬಂಡಿ, ಮುದೂಟಗಿ ರೈತರು ಪಂಪ್‌ಹೌಸ್‌ಗಳಿಗೆ ಕೀಲಿಹಾಕಿದ್ದರು. ಮನವೊಲಿಕೆ ನಂತರ ಮತ್ತೆ ನೀರು ಹರಿಸಬೇಕೆಂದರೆ ಜುಲೈ 31ಕ್ಕೆ ಮತ್ತೆ ಮುದೂಟಗಿ ಬಳಿ ಕೊಳವೆಯಲ್ಲಿ ಸೋರಿಕೆ ಉಂಟಾಗಿತ್ತು. ಅದೂ ದುರಸ್ತೆಯಾಗಿ ಪಂಪ್‌ಗಳನ್ನು ಚಾಲು ಮಾಡುವಷ್ಟರಲ್ಲಿ ಇಳಕಲ್ ತಾಲ್ಲೂಕಿನ ಬಲಕುಂದಿ ಪಂಪ್‌ಹೌಸ್ ಬಳಿ ಸ್ಥಾಪಿಸಿರುವ 25 ಎಂವಿಎ ಸಾಮರ್ಥ್ಯದ ಪರಿವರ್ತಕ ಸುಟ್ಟಿದೆ. ಅಲ್ಲದೆ ಅದಕ್ಕೂ ಮೊದಲೇ (ಜುಲೈ 18) ಹೆಚ್ಚುವರಿಯಾಗಿರುವ (ಸ್ಟ್ಯಾಂಡ್‌ಬೈ) ಪರಿವರ್ತಕ ಸುಟ್ಟಿತ್ತು. ಆದರೆ ಅದರ ದುರಸ್ತಿಗೆ ಕೆಬಿಜೆಎನ್‌ಎಲ್ ಮತ್ತು ಗುತ್ತಿಗೆದಾರ ಪ್ರಯತ್ನಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ.