Breaking News

ಗದಗ- ಬೆಟಗೇರಿ ನಗರಸಭೆ | ಗದ್ದುಗೆ ಗುದ್ದಾಟ: ಎರಡೂ ಪಕ್ಷದಿಂದ ‘ಚತುರ ನಡೆ’

Spread the love

ದಗ: ಇಲ್ಲಿನ ಗದಗ- ಬೆಟಗೇರಿ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಮೊದಲನೇ ಅವಧಿ ಮುಗಿದು, ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡ ನಂತರದಿಂದ ಇಲ್ಲೀವರೆಗೆ ಹಲವು ರಾಜಕೀಯ ಮೇಲಾಟಗಳು, ಆರೋಪ- ಪ್ರತ್ಯಾರೋಪಗಳು, ಕಾನೂನು ಹೋರಾಟಗಳು ನಡೆದಿದ್ದು, ನಗರಸಭೆ ಗದ್ದುಗೆ ಏರಲು ಎರಡೂ ಪಕ್ಷಗಳು ನಡೆಸಿರುವ ಚತುರ ನಡೆಗಳು ಚುನಾವಣಾ ಕಣವನ್ನು ರಂಗೇರಿಸಿವೆ.

 

ಇದರ ಮಧ್ಯೆ, ಮೀಸಲಾತಿ ಪ್ರಕಟಗೊಂಡು 23 ದಿನಗಳ ಬಳಿಕ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ ಧಾರವಾಡದ ಹೈಕೋರ್ಟ್‌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ಅದರ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿದ್ದಾರೆ. ಇದರಿಂದಾಗಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಕೂಡ ವಿಳಂಬವಾಗಲಿದೆ.

ಈಗ ಸಿಕ್ಕಿರುವ 11 ದಿನಗಳ ಅವಧಿಯಲ್ಲಿ ನಗರಸಭೆ ಗದ್ದುಗೆ ಗುದ್ದಾಟಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬೆಳವಣಿಗೆಗಳು ಆಗುವುದು ನಿಶ್ಚಿತ ಎಂಬ ಪರಿಸ್ಥಿತಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ.

35 ಮಂದಿ ಸದಸ್ಯ ಬಲದ ಗದಗ ಬೆಟಗೇರಿ ನಗರಸಭೆಯಲ್ಲಿ ಪ್ರಸ್ತುತ 18 ಮಂದಿ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಸೇರಿ 17 ಮಂದಿ ಕಾಂಗ್ರೆಸ್‌ ಸದಸ್ಯರು ಇದ್ದಾರೆ. ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವ ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ಮತದಾನ ಹಕ್ಕು ಇರುತ್ತದೆ.

ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಅವರ ವಿಳಾಸವನ್ನು ಗದಗಕ್ಕೆ ವರ್ಗಾಯಿಸಿ ಇಲ್ಲಿ ಮತದಾನ ಮಾಡಿಸುವ ಪ್ರಯತ್ನ ನಡೆಸಿದೆ. ಅದೇರೀತಿ, ಬಿಜೆಪಿಯವರು ಎಸ್‌.ವಿ.ಸಂಕನೂರ ಅವರ ವಿಳಾಸ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಈ ಪ್ರಕರಣ ಇನ್ನೂ ಉಪವಿಭಾಗಾಧಿಕಾರಿ ಬಳಿ ಇದ್ದು ಇತ್ಯರ್ಥವಾಗಿಲ್ಲ.

ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡ ನಂತರ ಮೊದಲ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಉಷಾ ದಾಸರ, ಅನೀಲ್‌ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರು ನಕಲಿ ಠವಾವು ಸೃಷ್ಟಿಸಿ, ಅದಕ್ಕೆ ಪ್ರಭಾರ ಪೌರಾಯುಕ್ತರ ನಕಲಿ ಸಹಿ ಮಾಡಿ, ವಕಾರ ಸಾಲು ಜಾಗವನ್ನು ಐದು ವರ್ಷಗಳ ಅವಧಿಗೆ ಕಾನೂನುಬಾಹಿರವಾಗಿ ಗುತ್ತಿಗೆ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.

ಈ ಸಂಬಂಧ ಹಿಂದಿನ ಪ್ರಭಾರ ಪೌರಾಯುಕ್ತರು ಆ.14ರಂದು ನಗರಸಭೆಯ ಮೂವರು ಬಿಜೆಪಿ ಸದಸ್ಯರು ಸೇರಿದಂತೆ ಒಟ್ಟು ಆರು ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ರದ್ದಾಗಿದ್ದರೆ ನಾವು ಆಡಳಿತದ ಚುಕ್ಕಾಣಿಯನ್ನು ಸಲೀಸಾಗಿ ಹಿಡಿಯಬಹುದು ಎಂದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು.

ಆದರೆ, ಬಿಜೆಪಿಯ ಮೂವರು ಸದಸ್ಯರು ಕೂಡ ಪೌರಾಯುಕ್ತ ದಾಖಲಿಸಿದ್ದ ಎಫ್‌ಐಆರ್‌ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪೀಠ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತು. ಇದರಿಂದಾಗಿ, ಬಂಧನ ಹಾಗೂ ಸದಸ್ಯತ್ವ ರದ್ದಾಗುವ ಭೀತಿಯಲ್ಲಿದ್ದ ಬಿಜೆಪಿಯ ಮೂವರು ಸದಸ್ಯರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ