ಬೆಳಗಾವಿ: ‘ನಗರದಲ್ಲಿ ಕೈಗಾರಿಕೆಯವರು ರಸ್ತೆ ಬದಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೈಗಾರಿಕೆ ಇಲಾಖೆಯ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳ ತ್ಯಾಜ್ಯವನ್ನು ಮರುಬಳಕೆ ಮಾಡಲು ಅವಕಾಶವಿಲ್ಲ. ಹಾಗಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನ್ವಯ, ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.
‘ಕೈಗಾರಿಕಾ ಪ್ರದೇಶದ ಕ್ಯಾಂಟೀನ್ ಮತ್ತು ಹೋಟೆಲ್‌ಗಳ ಕಸ ವಿಲೇವಾರಿಗೆ ಮಾತ್ರ ನಮಗೆ ಅವಕಾಶವಿದೆ. ಕೈಗಾರಿಕೆಯ ಉಳಿದ ಪರಿಸರದಲ್ಲಿನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಖರ್ಚು-ವೆಚ್ಚ ತಗುಲುವುದರಿಂದ ಅದು ಸಾಧ್ಯವಿಲ್ಲ’ ಎಂದು ಪಾಲಿಕೆ ಅಧಿಕಾರಿಗಳು ವಿವರಿಸಿದರು.
ಜಾಗೃತಿ ಮೂಡಿಸಿ: ‘ಬಳ್ಳಾರಿ ನಾಲೆಯ ಕಲುಷಿತ ನೀರನ್ನು ಕೆಲವು ರೈತರು ಕೃಷಿಗೆ ಬಳಸುತ್ತಿರುವುದು ಕಂಡು ಬಂದಿದೆ. ಇಂಥ ನೀರು ಬಳಸದಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಜನರಿಗೆ ಶುಚಿಯಾಗಿರುವ ತರಕಾರಿ ತಲುಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕು’ ಎಂದು ಮೊಹಮ್ಮದ್ ರೋಷನ್ ತಿಳಿಸಿದರು.