Breaking News

ಗುಲಬರ್ಗಾ ವಿವಿ ಘಟಿಕೋತ್ಸವ: ರೈತನ ಮಗಳಿಗೆ 13 ಚಿನ್ನದ ಪದಕ

Spread the love

ಲಬುರಗಿ: ಗ್ರಾಮೀಣ ಭಾಗದ ಕೃಷಿ ಕುಟುಂಬದಿಂದ ಬಂದ ಆನಂದಮ್ಮ ಅವರು ಕನ್ನಡ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.

ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದ ರೈತ ದೇವಿಂದ್ರಪ್ಪ ಅವರ ಪುತ್ರಿ ಆನಂದಮ್ಮ. ಗುಲಬರ್ಗಾ ವಿವಿಯ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ 42ನೇ ಘಟಿಕೋತ್ಸವದಲ್ಲಿ ಮಗಳು ಚಿನ್ನದ ಪದಕ ಮತ್ತು ಪದವಿ ಪಡೆಯುವುದನ್ನು ಕೃಷಿಕರಾದ ದೇವಿಂದ್ರಪ್ಪ ಅವರು ಕುಟುಂಬ ಸಮೇತ ಬಂದು ಕಣ್ತುಂಬಿಕೊಂಡರು.

ಜೇವರ್ಗಿ ತಾಲ್ಲೂಕಿನ ಯನಗುಂಟಿ ಸರ್ಕಾರಿ ಶಾಲೆಯ ಶಿಕ್ಷಕಿಯೂ ಆಗಿರುವ ಆನಂದಮ್ಮ, ‘ತಾಯಿ- ತಂದೆಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ 13 ಚಿನ್ನದ ಪದಕಗಳು ಪಡೆಯಲು ಸಾಧ್ಯವಾಯಿತು. ಮೊದಲ ವರ್ಷ ಬಾಡಿಗೆ ರೂಮ್‌ನಲ್ಲಿ ಇದ್ದಿದ್ದರಿಂದ ಹೆಚ್ಚಿನ ಸಮಯ ಸಿಗಲಿಲ್ಲ. 2ನೇ ವರ್ಷದಲ್ಲಿ ಹಾಸ್ಟೆಲ್‌ಗೆ ಸೇರಿದ ನಂತರ ಹೆಚ್ಚಿನ ಸಮಯ ಸಿಕ್ಕಿತು. ಯಾವುದೇ ಟೈಮ್ ಟೇಬಲ್ ಹಾಕಿಕೊಳ್ಳದೆ ನಿರಂತರವಾಗಿ ಓದುತ್ತಿದ್ದೆ’ ಎಂದು ಸಂತಸ ಹಂಚಿಕೊಂಡರು.

‘ಸೀನಿಯರ್‌ಗಳು ಗೋಲ್ಡ್‌ ಮೆಡಲ್‌ ಪಡೆದು ಸಂಭ್ರಮಿಸುತ್ತಿದ್ದ ಪರಿ ನೋಡಿ ನಾನೂ ಮೆಡಲ್ ಪಡೆಯಬೇಕು ಎಂದು ಅಭ್ಯಾಸ ಮಾಡಿದೆ. 15 ಪದಕಗಳನ್ನು ನಿರೀಕ್ಷಿಸಿದ್ದೆ. ಆದರೆ, 13 ಪದಕಗಳು ಪಡೆಯಲು ಸಾಧ್ಯವಾಯಿತು. ಪ್ರಸ್ತುತ ಶಿಕ್ಷಕಿಯಾಗಿದ್ದು, ಸಹಾಯಕ ಪ್ರಾಧ್ಯಾಪಕಿ ಆಗುವ ಇಚ್ಛೆ ಇದೆ’ ಎಂದರು.

ರೈತ ದೇವಿಂದ್ರಪ್ಪ ಮಾತನಾಡಿ, ‘ಮಗಳ ಇಚ್ಛೆಯಂತೆ ಓದಿಸಿದ್ದೇವೆ. ಯಾವ ವಿಷಯಗಳಲ್ಲಿ ಗೋಲ್ಡ್‌ ಮೆಡಲ್ ಪಡೆದಿದ್ದಾಳೆ ಗೊತ್ತಿಲ್ಲ. ಆದರೆ, ಅವಳು ಸಾಕು ಎನ್ನುವವರೆಗೂ ಓದಿಸುತ್ತೇವೆ’ ಎಂದರು.

ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ನೌಕರ ಆಂಜನೇಯ ಅವರ ಪುತ್ರಿ ಪೂರ್ವಿಕಾ ಎ. ಗದ್ವಾಲ ಅವರು ಪ್ರಾಣಿಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ‘ನನ್ನ ಓದಿಗೆ ಕುಟುಂಬಸ್ಥರು ನೀಡಿದ ಬೆಂಬಲದಿಂದಾಗಿ ಏಳು ಚಿನ್ನದ ಪದಕಗಳನ್ನು ಪಡೆದಿದ್ದೇನೆ. ನಮ್ಮ ತಂದೆ ಸರ್ಕಾರಿ ನೌಕರರಾಗಿದ್ದು, ನನಗೆ ಸಹಾಯಕ ಪ್ರಾಧ್ಯಾಪಕಿ ಆಗುವ ಇಚ್ಛೆ ಇದೆ’ ಎಂದರು.  

ಎಂಬಿಎ ಅಧ್ಯಯನ ವಿಭಾಗದ ಅಭಿಷೇಕ್, ಸಮಾಜಕಾರ್ಯ ವಿಭಾಗದ ಅಂಬಿಕಾ ಮತ್ತು ರಾಜ್ಯಶಾಸ್ತ್ರ ವಿಭಾಗದ ಪಲ್ಲವಿ ತಲಾ 6, ಸಸ್ಯವಿಜ್ಞಾನ ವಿಭಾಗದ ಆಫ್ರಿನ್ ಸುಲ್ತಾನ್, ಜೀವರಸಾಯನ ವಿಜ್ಞಾನ ವಿಭಾಗದ ವಿಷ್ಣುಕಾಂತ, ಎಂಸಿಎ ವಿಭಾಗದ ಮಲ್ಕಮ್ಮ ಹಾಗೂ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಭಾಗ್ಯಾ ತಲಾ ಐದು ಚಿನ್ನದ ಪದಕಗಳನ್ನು ಪಡೆದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ