ಶಿರಾಳಕೊಪ್ಪ: ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಳಗುಂದ ಮತ್ತು ಉಡುಗಣಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ರೈತರು ಕಂಗಲಾಗಿದ್ದಾರೆ.
ಈ ಭಾಗದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಶೇ 33ರಷ್ಟು ಹೆಚ್ಚುವರಿ ಮಳೆ ಸುರಿದಿದೆ.
ಪ್ರಾಥಮಿಕ ವರದಿಯ ಪ್ರಕಾರ 1,350 ಹೆಕ್ಟೇರ್ ಮೆಕ್ಕೆಜೋಳದ ಬೆಳೆ ಹಾಳಾಗಿದ್ದು, ಅಂದಾಜು ₹ 4.23 ಕೋಟಿ ಮೊತ್ತದ ಬೆಳೆ ನಾಶವಾಗಿದೆ. ನಾಶವಾಗದೆ ಉಳಿದಿರುವ ಮೆಕ್ಕೆಜೋಳದ ಪೈರಿನ ಇಳುವರಿ ಕ್ಷೀಣಿಸುತ್ತಿದ್ದು, ಕೆಲವು ಕಡೆ ಕಂದು ಮತ್ತು ಕೆಂಪು ಬಣ್ಣಕ್ಕೆ ತಿರುಗಿದೆ. ಇನ್ನೂ ಸಾವಿರಾರು ಹೆಕ್ಟೇರ್ ಜೋಳದ ಬೆಳೆ ಕುಂಠಿತವಾಗಲಿದೆ ಎಂದು ರೈತರು ಚಿಂತಿತರಾಗಿದ್ದಾರೆ.
ತಾಳಗುಂದ 5,120 ಹೆಕ್ಟೇರ್, ಉಡುಗಣಿ 2,350 ಹೆಕ್ಟೇರ್, ಅಂಜನಾಪುರ 1,920 ಹೆಕ್ಟೇರ್, ಹೊಸೂರು 8,960 ಹೆಕ್ಟೇರ್, ಕಸಬಾ 1,150 ಹೆಕ್ಟೇರ್ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 19,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.