ವಿಜಯಪುರ(ದೇವನಹಳ್ಳಿ): ’50 ವರ್ಷದ ಹಿಂದೆ ಹಲವು ಮಂದಿಗೆ ಕೆಲಸ ಕೊಟ್ಟ ನನ್ನ ಕೈಗಳು ಈಗ ಸೋತಿವೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ಜೀವನ ಸಾಗಿಸಲು ಬೀದಿಯಲ್ಲಿ ಸಿಗುವ ಖಾಲಿ ಬಾಟಲಿ ಮತ್ತು ರಟ್ಟನ್ನು ಹೆಕ್ಕಿ ಮಾರಿ ಒಂದೂತ್ತಿನ ಹೊಟ್ಟೆ ಹೊರೆಯುತ್ತಿದ್ದೇನೆ…’
-ಇದು ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ 95 ವರ್ಷದ ಜಯರಾಮಯ್ಯ ಅವರ ನುಡಿ.
ಬಾಗಿದ ಬೆನ್ನು, ಬಾಟಲಿ ಮತ್ತು ರಟ್ಟು ತುಂಬಿದ ಸೈಕಲ್ ಅನ್ನು ನಡುಗುತ್ತಾ ತಳುತ್ತಾ ಪಟ್ಟಣದಲ್ಲಿ ಸಾಗುವ ವೇಳೆ ಮಾತಿಗೆ ಸಿಕ್ಕ ಅವರು ತಮ್ಮ ವ್ಯಥೆ ಬಿಚ್ಚಿಟ್ಟರು.
ಯಾರ ಆಶ್ರಯವೂ ಇಲ್ಲದ ಅವರು ಬಾಡಿಗೆ ಮನೆವೊಂದರಲ್ಲಿ ವಾಸವಿರುವ ಜಯರಾಮಯ್ಯ, ಖಾಲಿ ನೀರಿನ ಬಾಟಲಿ ಮತ್ತು ರಟ್ಟು ಸಂಗ್ರಹಿಸಿ, ಅದನ್ನು ಮಾರಿ ಅದರಲ್ಲಿ ಸಿಗುವ ಹಣದಿಂದ ತಮ್ಮ ಸಂಧ್ಯಾಕಾಲ ಕಳೆಯುತ್ತಿದ್ದಾರೆ.