ಬೆಳಗಾವಿ: ದೇಶ ಬೆಳೆಯುತ್ತಿದೆ; ರಾಜ್ಯವೂ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಹಾಗೆಯೇ ನಮ್ಮ ಅಂಗನವಾಡಿಗಳೂ ಉನ್ನತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ ಅಂಗನವಾಡಿಗಳನ್ನು ಆಧುನೀಕರಣಗೊಳಿಸುತ್ತಿದೆ
ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಇಲಾಖೆ ವತಿಯಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಇದು ಪೈಪೋಟಿ ಯುಗ, ಆಧುನಿಕ ತಂತ್ರಜ್ಞಾನದ ಯುಗ. ಇಂತಹ ಯುಗದಲ್ಲಿ ಬಿಡುವಿಲ್ಲದೆ ದುಡಿಯುವ ಜನರ ಮಕ್ಕಳು, ರೈತರ ಮಕ್ಕಳೂ ನರ್ಸರಿ ಕಲಿಯಬೇಕೆಂಬ ಆಶಯದಿಂದ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ.ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 250 ಎಲ್‌ಕೆಜಿ, ಯುಕೆಜಿ ನರ್ಸರಿಗಳು ಚಾಲನೆಗೊಂಡಿವೆ ಎಂದು ಹೇಳಿದರು.
49 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಈಗ ಮತ್ತೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸುವ ಮೂಲಕ ಕರ್ನಾಟಕ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯುವಂತ ಹೊಸ ದಾಖಲೆ ಮಾಡಿದೆ.
ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ದಿ. ಇಂದಿರಾ ಗಾಂಧಿಯವರು ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪಿಸಿದರು. ಮುಂದಿನ ವರ್ಷಕ್ಕೆ ಅಂಗನವಾಡಿಗಳು 50 ವರ್ಷ ತುಂಬಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.