ಶಿರಾಳಕೊಪ್ಪ: ಎರಡು ವಾರಗಳಿಂದ ಸತತವಾಗಿ ಸುರಿಸುತ್ತಿದ್ದ ಮಳೆ ಸ್ವಲ್ಪ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಭತ್ತದ ಸಸಿ ನೆಡುವುದು, ಅಡಿಕೆ ಅಡಿಕೆ ಆರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗಳಲ್ಲಿ ರೈತ ಮಹಿಳೆಯರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ಅಲ್ಲಲ್ಲಿ ಜೋಳದ ಬೆಳೆಗಳು ಜೌಗಿನಿಂದ ಕೆಂಪಾಗುತ್ತಿದ್ದು, ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ.
ಕಳೆದ ವರ್ಷ ಭೀಕರ ಬರಗಾಲದಿಂದ ರೈತರು ತೋಟ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದರು. ಈ ಬಾರಿ ತಾಳಗುಂದದ ಪ್ರಣವೇಶ್ವರ ಕೆರೆ, ಬಳ್ಳಿಗಾವಿಯ ಜಿಡ್ಡಿಕೆರೆ, ಬಸವಂದಿಹಳ್ಳಿ ಕೆರೆ, ಹಿರೆಜಂಬೂರು, ಮಳೂರು, ತಡಗಣಿ, ಕೌಲಿ, ತೊಗರ್ಸಿ, ಕೊಳಗಿ, ಯಳಗೆರಿ, ನರಸಾಪುರ, ಶಂಕ್ರಿಕೊಪ್ಪ, ಕಣಸೋಗಿ ಸೇರಿದಂತೆ ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.
‘ಬರಗಾಲದಿಂದ ಬದುಕು ಕಳೆದುಕೊಂಡಿದ್ದ ರೈತರಿಗೆ ಈ ಮಳೆಯು ಮತ್ತೊಂದು ಜನ್ಮ ನೀಡಿದೆ’ ಎಂದು ಹಿರೇಜಂಬೂರಿನ ರೈತ ಯಶವಂತ್ ಕುಮಾರ್ ಸಂತಸ ಹಂಚಿಕೊಂಡರು.