ನಿಪ್ಪಾಣಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನವೇ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಸಂಜೆಯವರೆಗೆ ಸುಮಾರು 40ಕ್ಕೂ ಅಧಿಕ ಕುಂಟುಂಬಗಳು ಜಾನುವಾರುಗಳ ಸಮೇತ ಸ್ಥಳಾಂತರಣೆ ಮಾಡಿದ್ದು 50ಕ್ಕೂ ಅಧಿಕ ಕುಟುಂಬಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
ಹುನ್ನರಗಿ ಗ್ರಾಮದ 41 ಕುಟುಂಬಗಳಲ್ಲಿಯ ಒಟ್ಟು 89 ಜನರಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 26 ಕುಟುಂಬಗಳು ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸ್ಥಾಪಿಸಿದ ಗಂಜಿ ಕೇಂದ್ರದಲ್ಲಿ ಸ್ಥಳಾಂತರಿಸಲಾಗಿದೆ. ಇನ್ನುಳಿದ 15 ಕುಟುಂಬಗಳು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ಹುನ್ನರಗಿ ಗ್ರಾಮದ ಪಕ್ಕದ ಸಿದ್ನಾಳ ಗ್ರಾಮದಲ್ಲಿಯೂ ಕೂಡ 4 ಕುಟುಂಬಗಳಿಗೆ ಸ್ಥಳಾಂತರಿಸಲಾಗಿದೆ. ನಾಲ್ಕೂ ಕುಟುಂಬಗಳು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಸಿದ್ನಾಳ ಗ್ರಾಮದ ಸರ್ಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಮುಜಫ್ಫರ್ ಬಳಿಗಾರ ಹೇಳಿದ್ದಾರೆ.