ಬೆಂಗಳೂರು, ಜುಲೈ 26: ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್‌ಗಳೆರಡೂ ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಹಿಟ್ಲರ್‌ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ.
ಹಿಂದೆ ದೇವರಾಜ ಅರಸರ ವಿಚಾರದಲ್ಲೂ ಹೀಗೆ ಆಯಿತು. ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಯಿತು. ಅದಕ್ಕೂ ಮೊದಲು ಕಲ್ಯಾಣದ ಬಿಜ್ಜಳನನ್ನು ಇದೆ ಪೇಶ್ವೆ ಮನಸ್ಥಿತಿಯ ಜನರೆ ಕೊಲೆ ಮಾಡಿದರು. ಈಗ ನನ್ನ ವಿಚಾರಕ್ಕೂ ಬಂದಿದ್ದೀರಿ. ಅಡ್ಡಿಯಿಲ್ಲ ಬನ್ನಿ, ಬಂದದ್ದು ಒಳ್ಳೆಯದೆ ಆಯಿತು. ರಾಜ್ಯದ ಜನ ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೆ ಮಾಡಬಾರದೆಂಬ ನಿಲುವು ಇವರದು. ಆದ್ದರಿಂದಲೆ ಈ ರೀತಿ ಮುಡಾ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನ್ಯತೆಯಿಲ್ಲದಿದ್ದರೂ ದೊಡ್ಡ ಸುದ್ದಿ ಮಾಡಿಕೊಂಡು ಕೂತಿದ್ದಾರೆ.