ರಾಯಚೂರು: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡಗಳನ್ನು ತಕ್ಷಣ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಲಿಂಗಸುಗೂರು ತಾಲ್ಲೂಕಿನ ಅನ್ವರಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ನಿರ್ಮಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದು ವಿದ್ಯಾರ್ಥಿ ತಲೆಗೆ ಪೆಟ್ಟಾಗಿದೆ. ರಾಯಚೂರಿನ ಅರಸಿಗೇರ ಶಾಲೆಯ ಚಾವಣಿಯ ಸಿಮೆಂಟ್ ಕಳಚಿ ಬಿದ್ದು ಮಕ್ಕಳು ಗಾಯಗೊಂಡಿದ್ದರು. ದೇವದುರ್ಗದ ಸರ್ಕಾರಿ ಬಾಲಕಿಯರ ಶಾಲೆಯ ಚಾವಣಿಯ ಸಿಮೆಂಟ್ ಕಳಚಿ ಬಿದ್ದು ವಿದ್ಯಾರ್ಥಿನಿಯ ಕಾಲಿಗೆ ತೀವ್ರ ಪೆಟ್ಟಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಶಿಕ್ಷಣ ಇಲಾಖೆ ಕಟ್ಟಡಗಳ ದುರಸ್ತಿಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.