ಶಿರಹಟ್ಟಿ: ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಕೇಂದ್ರವು ಇಲ್ಲಗಳ ಮಧ್ಯಯೇ ಸಾಗುತ್ತಿದೆ. ಮೂಲ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕಿನ ಜನರು ಸುಗಮ ಸಂಚಾರವಿಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾರೆ.
ಹದಗೆಟ್ಟ ಗ್ರಾಮೀಣ ರಸ್ತೆಗಳು: ತಾಲ್ಲೂಕಿನ ತಂಗೋಡ, ಕೊಗನೂರು, ತೊಳಲಿ, ಚವಡಾಳ, ಗೋವನಕೊಪ್ಪ, ಅಲಗಿಲವಾಡ, ವಡವಿ, ಸುಗನ, ಮಾಗಡಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ಬಿದ್ದು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.
ಓವರ್ ಲೋಡ್ ವಿಥೌಟ್ ಪಾಸ್: ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಕ್ರಷರ್‌ಗಳ ಹಾವಳಿ, ಅಕ್ರಮ ಮರಳು ದಂದೆಯಿಂದ ಓವರ್ ಲೋಡ್ ಹೊತ್ತ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತಿವೆ. ಮಣಬಾರವನ್ನು ಹೊತ್ತು ಸಾಗುವ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಮನೆ ಮಾಡಿವೆ. ಕೊಗನೂರು ಗ್ರಾಮದ ರಸ್ತೆಯಲ್ಲಂತೂ ಮೊಣಕಾಲದವರೆಗೆ ಗುಂಡಿಗಳು ಬಿದ್ದರೂ ಯಾರೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ದುರಸ್ತಿ ಮಾಡುವ ಗೋಜಿಗೆ ಹೋಗುತ್ತಿಲ್ಲ.