ರಾಯಚೂರು: ರಾಜ್ಯದಲ್ಲಿ ಯಾವ ಸರ್ಕಾರ ಬಂದರೇನು?, ಹೋದರೇನು? ಸರ್ಕಾರದ ಮಾತಿಗೆ ಜಿಲ್ಲೆಯಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಜಿಲ್ಲೆಯ ಹಲವೆಡೆ ನೀರಿಗಾಗಿ ಪರಿತಪಿಸುತ್ತ ವರ್ಷ ಕಳೆದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಚುನಾಯಿತ ಪ್ರತಿನಿಧಿಗಳೂ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ.
ಹೀಗಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನರ ಗೋಳು ಹೆಚ್ಚಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಯಾವ ಲೆಕ್ಕಕ್ಕೂ ಇಲ್ಲ. ಅವರು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೂಲಕವಾದರೂ ಸಮಸ್ಯೆ ಅರಿತುಕೊಳ್ಳಲು ಪ್ರಯತ್ನಿಸಬಹುದು ಎನ್ನುವ ಭರವಸೆಯೂ ಇದೀಗ ಹುಸಿಯಾಗಿದೆ.
ಮಹಿಳೆಯರು ಮಕ್ಕಳು ಜಿಲ್ಲಾಧಿಕಾರಿ ನಿವಾಸ, ಜಿಲ್ಲಾಡಳಿತ ಕಚೇರಿ, ತಾಲ್ಲೂಕು ಆಡಳಿತ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳ ಮುಂದೆ ನೀರಿಗಾಗಿ ಕೊಡ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರು ಕೊಡಬೇಕಾದ ಅಧಿಕಾರಿಗಳು ಪ್ರತಿಭಟನೆ ನಡೆಸಿದವರ ವಿರುದ್ಧವೇ ಪ್ರಕರಣ ದಾಖಲಿಸಿ, ನೋಟಿಸ್ ಕೊಟ್ಟು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಆಡಳಿತದ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ.